ಮನೆ ರಾಷ್ಟ್ರೀಯ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ: ಭಯೋತ್ಪಾದಕರಿಗೆ ಊಹೆಗೂ ಮೀರಿದ ಶಿಕ್ಷೆ ಸಿಗಲಿದೆ : ಪ್ರಧಾನಿ ಮೋದಿ ಎಚ್ಚರಿಕೆ

ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ: ಭಯೋತ್ಪಾದಕರಿಗೆ ಊಹೆಗೂ ಮೀರಿದ ಶಿಕ್ಷೆ ಸಿಗಲಿದೆ : ಪ್ರಧಾನಿ ಮೋದಿ ಎಚ್ಚರಿಕೆ

0

ಪಾಟ್ನಾ, ಏಪ್ರಿಲ್ 24: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಈ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರು ಮತ್ತು ಸಂಚು ರೂಪಿಸಿದವರಿಗೆ “ಕಲ್ಪನೆಗೂ ಮೀರಿದ ಶಿಕ್ಷೆ” ಸಿಗಲಿದೆ ಎಂದು ಘೋಷಿಸಿದ್ದಾರೆ.

ಬಿಹಾರದ ಮಧುಬನಿಯಲ್ಲಿ ನಡೆದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದ ಭದ್ರತೆ ಕುರಿತು ಗಂಭೀರ ಸಂದೇಶ ನೀಡಿದರು.

ಮೌನಾಚರಣೆ ಮೂಲಕ ಶ್ರದ್ಧಾಂಜಲಿ, ನಂತರ ಗುಡುಗಿನ ಭಾಷಣ

ಕಾರ್ಯಕ್ರಮ ಆರಂಭಕ್ಕೂ ಮೊದಲು, ಪಹಲ್ಗಾಮ್ ದಾಳಿಯಲ್ಲಿ ಹತರಾದ ಅಮಾಯಕ ನಾಗರಿಕರಿಗೆ 1 ನಿಮಿಷ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಭಾವೋದ್ವೇಗದಿಂದ ಮಾತನಾಡಿದ ಮೋದಿ, “ಭಾರತವು ಭಯೋತ್ಪಾದಕರನ್ನು ಮಾತ್ರವಲ್ಲ, ಅವರನ್ನು ಬೆಂಬಲಿಸುವವರನ್ನೂ ಗುರುತಿಸಿ, ಶಿಕ್ಷೆ ನೀಡಲಿದೆ,” ಎಂದು ಹೇಳಿದರು.

ಜಾಗತಿಕ ಸಂದೇಶ: ಭಾರತ ಶಕ್ತಿ ತೋರಿಸುತ್ತದೆ

“ಇಂದು ಬಿಹಾರದ ನೆಲದಲ್ಲಿ ನಿಂತು ನಾನು ಇಡೀ ಜಗತ್ತಿಗೆ ಹೇಳುತ್ತೇನೆ – ಭಾರತವು ಯಾವ ಭಯೋತ್ಪಾದಕನನ್ನೂ ಕ್ಷಮಿಸುವುದಿಲ್ಲ. ಅವರು ಎಲ್ಲಿ ಇರುವರೂ, ಯಾರ ಬೆಂಬಲದಲ್ಲಿರುವರೂ, ನಾವು ಅವರನ್ನು ಪತ್ತೆಹಚ್ಚಿ ಶಿಕ್ಷಿಸುತ್ತೇವೆ,” ಎಂದು ಪ್ರಧಾನಿ ಹೇಳಿದರು.

ಅವರು ಮುಂದಾಗಿ, “ಪಹಲ್ಗಾಮ್ ದಾಳಿಗೆ ಸಂಚು ರೂಪಿಸಿದವರು ಈಗ ಊಹಿಸದಂತಹ ಶಿಕ್ಷೆಗೆ ಸಿದ್ಧರಾಗಬೇಕು. 140 ಕೋಟಿ ಭಾರತೀಯರ ಕ್ರೋಧ ಮತ್ತು ಇಚ್ಛಾಶಕ್ತಿ, ಈ ಭಯೋತ್ಪಾದನೆಯ ಮಾಸ್ಟರ್‌ಗಳ ಬೆನ್ನು ಮುರಿಯಲಿದೆ,” ಎಂದು ಗಟ್ಟಿಯಾಗಿ ಹೇಳಿದರು.

ಜಾಗತಿಕ ಸಮರ್ಥನೆಗೆ ಧನ್ಯವಾದ: ಪ್ರಧಾನಿ ಧ್ವನಿ

ಮೋದಿಯವರು ತಮ್ಮ ಭಾಷಣದಲ್ಲಿ ವಿವಿಧ ದೇಶಗಳು ಮತ್ತು ಅವರ ನಾಯಕರ ಸಹಾನುಭೂತಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. “ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರು ಇಂದು ನಮ್ಮೊಂದಿಗಿದ್ದಾರೆ. ಜಗತ್ತಿನಾದ್ಯಾಂತ ಜನತೆ ಈ ಕೃತ್ಯವನ್ನು ಖಂಡಿಸುತ್ತಿದ್ದಾರೆ,” ಎಂದು ಹೇಳಿದರು.

ಭದ್ರತೆಗೆ ಗಟ್ಟಿತನದ ಭರವಸೆ

ಪಹಲ್ಗಾಮ್ ದಾಳಿಯ ಬಳಿಕ ದೇಶದ ಭದ್ರತೆ ಬಗ್ಗೆ ಜನರಲ್ಲಿದ್ದ ಆತಂಕಕ್ಕೆ ಉತ್ತರವಾಗಿ, ಪ್ರಧಾನಿ ಮೋದಿ ನೀಡಿದ ಗಟ್ಟಿತನದ ಈ ಭರವಸೆ, ದೇಶದ ಜನತೆಗೆ ಧೈರ್ಯ ನೀಡಿದೆ. ಉಗ್ರತೆ ವಿರುದ್ಧದ ಹೋರಾಟದಲ್ಲಿ ಭಾರತ ಒಂದು ಸಧೃಢ ರಾಷ್ಟ್ರವಾಗಿ ಮುಂದುವರೆಯಲಿದೆ ಎಂಬ ನಂಬಿಕೆಯನ್ನು ಪ್ರಧಾನಿ ಪುನರ್‌ಸ್ಥಾಪಿಸಿದರು.