ಮನೆ ಅಪರಾಧ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ: ನೆರೆಮನೆಯವರಿಂದಲೇ ನಡೆಯಿತಾ ಕೃತ್ಯ?

ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ: ನೆರೆಮನೆಯವರಿಂದಲೇ ನಡೆಯಿತಾ ಕೃತ್ಯ?

0

ಮೈಸೂರು(Mysuru): ಮಾನಸಗಂಗೋತ್ರಿ ಆವರಣದಲ್ಲಿ ಶುಕ್ರವಾರ ಸಂಜೆ ವಾಹನ ಡಿಕ್ಕಿ ಹೊಡೆದು ಸಾವಿಗೀಡಾದ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ (82) ಹತ್ಯೆಯ ಹಿಂದೆ ನೆರೆಮನೆಯವರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ನಡುವೆ ಕುಲಕರ್ಣಿ ಅವರ ಅಳಿಯ (ಮಗಳ ಗಂಡ) ಸಂಜಯ್‌ ಅಂಗಡಿ ದೂರು ನೀಡಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ದೂರಿನಲ್ಲೇನಿದೆ ?

ಆರ್‌.ಕೆ.ಕುಲಕರ್ಣಿ ನಿವಾಸದ ದಕ್ಷಿಣದ ಕಡೆಗೆ ಮಾದಪ್ಪ ಅವರು ಮನೆ ಕಟ್ಟುವ ಸಂದರ್ಭದಲ್ಲಿ ಜಾಗ ಬಿಡದೇ, ಮೈಸೂರು ಪಾಲಿಕೆ ಬೈಲಾದ ವಿರುದ್ಧವಾಗಿ ಕಾಮಗಾರಿ ಆರಂಭಿಸಿದ್ದರು. ಈ ವೇಳೆ, ಜಾಗ ಬಿಡುವಂತೆ ಕುಲಕರ್ಣಿ ಕೋರಿದ್ದರು. ಈ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಇದನ್ನು ಪ್ರಶ್ನಿಸಿ ಮಾದಪ್ಪ ಹೈಕೋರ್ಟ್‌’ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಕಾನೂನು ಬಾಹಿರವಾಗಿ ಮನೆ ಕಟ್ಟಿರುವುದನ್ನು ತೆರವುಗೊಳಿಸಬೇಕು ಎಂದು ನ.2ರಂದು ಪಾಲಿಕೆಯ ಅಧಿಕಾರಿಗಳು ಸೂಚಿಸಿದ್ದರು.

ಅಮೆರಿಕದಲ್ಲಿದ್ದ ಮಗಳು, ಅಳಿಯನಿಗೆ ವಾಟ್ಸ್‌’ಆ್ಯಪ್‌ ಮುಖಾಂತರ ಕರೆ ಮಾಡಿ, ಮಾದಪ್ಪ ಮತ್ತು ಸಹಚರರು ನನ್ನನ್ನು ಹಿಂಬಾಲಿಸಿಕೊಂಡು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ನಂತರ ಮಗಳ ಸೂಚನೆಯಂತೆ, ಪೊಲೀಸರಿಗೂ ದೂರು ನೀಡಿದ್ದರು. ಅಲ್ಲದೇ, ನಗರ ಪೊಲೀಸ್‌ ಆಯುಕ್ತ, ಪ್ರಧಾನಿ ಕಚೇರಿಗೂ ದೂರು ಸಲ್ಲಿಸಿದ್ದರು. ಈ ಬೆಳವಣಿಗೆ ಮಧ್ಯೆಯೇ, ಕೊಲೆಯಾಗಿದೆ. ಮಾದಪ್ಪ ಮತ್ತು ಸಹಚರರ ವಿರುದ್ಧ ಸೂಕ್ತ ಕ್ರಮ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಡೆದಿದ್ದೇನು ?

ಶಾರದಾ ದೇವಿ ನಗರದ ನಿವಾಸಿಯಾಗಿದ್ದ ಕುಲಕರ್ಣಿ ಎಂದಿನಂತೆ ನ.4ರಂದು ಸಂಜೆ ವಾಯುವಿಹಾರಕ್ಕಾಗಿ ಕಾರ್‌’ನಲ್ಲಿ ಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ಅಲ್ಲಿ ವಾಕ್ ಮಾಡುತ್ತಿದ್ದರು. ಅವರ ವಾಹನ ಚಾಲಕ ಕಾರ್‌’ನೊಂದಿಗೆ ಕಾಯುತ್ತಿದ್ದರು. ಬಯೋ ಟೆಕ್ನಾಲಜಿ ವಿಭಾಗದ ಸಮೀಪದ ಕಿರಿದಾದ ರಸ್ತೆಯಲ್ಲಿ ಮುಂದಿನಿಂದ ಬಂದ ವಾಹನ ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದಿದೆ. ವಿಷಯ ತಿಳಿದ ಚಾಲಕ ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಅವರನ್ನು ಕರೆತಂದಿದ್ದರು. ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ವಿ.ವಿ.ಪುರಂನ ಸಂಚಾರ ಠಾಣೆ ಪೊಲೀಸರು ಹಿಟ್‌ ಆ್ಯಂಡ್‌ ರನ್‌ ಪ್ರಕರಣ ದಾಖಲಿಸಿದ್ದರು. ಬಳಿಕ, ಕೊಲೆ ಆಗಿರಬಹುದೆಂಬ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಮುರುಘಾ ಶ್ರೀಗಳ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಪೊಲೀಸರು
ಮುಂದಿನ ಲೇಖನಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಸಂವಿಧಾನ ಬದ್ದ: ಸುಪ್ರೀಂ ಕೋರ್ಟ್‌