ಮನೆ ರಾಜ್ಯ ಉಡುಪಿಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಅಪಮಾನ

ಉಡುಪಿಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಅಪಮಾನ

0

ಉಡುಪಿ : ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಅವಮಾನವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್ ಪ್ಲಾಜಾದಲ್ಲಿ ಘಟನೆ ನಡೆದಿದ್ದು, ವ್ಹೀಲ್‌ಚೇರ್‌ನಲ್ಲಿ ಕೂತು ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರು ಅಸಮಾಧಾನ ಹೊರಹಾಕಿದ್ದಾರೆ.

ಟೋಲ್ ಗೇಟ್‌ನಲ್ಲಿ ಟೋಲ್ ಫ್ರೀ ವ್ಯವಸ್ಥೆ ಇದೆ ಎಂದು ಹೇಳುತ್ತಾ ಶಾಮರಾಜ್ ಸೂಕ್ತ ದಾಖಲೆಗಳನ್ನು ಟೋಲ್ ಸಿಬ್ಬಂದಿಗೆ ತೋರಿಸಿದ್ದಾರೆ. ಇಷ್ಟಾದರೂ ಸಿಬ್ಬಂದಿ ಗೇಟ್ ದಾಟಲು ಬಿಟ್ಟಿಲ್ಲ. ಹಿರಿಯ ಅಧಿಕಾರಿಗಳಿಗೆ ಈ ಕಡತಗಳನ್ನು ಕಳುಹಿಸಿಕೊಡುವಷ್ಟರಲ್ಲಿ ಸಾಲು ಸಾಲು ವಾಹನಗಳು ಹಿಂಬದಿಯಿಂದ ನಿಂತು ಹಾರ್ನ್ ಮಾಡಿವೆ. ಆ ಕ್ಷಣಕ್ಕೆ ಶಾಮರಾಜ್ ಟೋಲ್ ಹಣ ಕಟ್ಟಿ, ಗೇಟ್ ಪಾಸ್ ಆಗಿದ್ದಾರೆ.

ಇದಾದ ನಂತರ ಟೋಲ್ ಗೇಟ್ ಪಕ್ಕದಲ್ಲಿ ಕೂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಮಾಜಿ ಯೋಧನಿಗೆ ಅವಮಾನ ಎಂದು ಜನ ಟೋಲ್ ಸಿಬ್ಬಂದಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಾಗುತ್ತಲೇ ಟೋಲ್ ಕಾರ್ಮಿಕರು ಶ್ಯಾಮರಾಜ್ ಅವರ ಕ್ಷಮೆ ಕೋರಿದ್ದಾರೆ. ಕಾಸರಗೋಡಿನ ಶ್ಯಾಮರಾಜ್ ವ್ಹೀಲ್ ಚೇರ್ ಅವಲಂಬಿಸಿ ಜೀವನ ನಡೆಸುತ್ತಿರುವ ಯೋಧ. ದುರಂತವೊಂದರಲ್ಲಿ ಸೇನಾ ವಾಹನ 400 ಅಡಿಗೆ ಬಿದ್ದಾಗ ಪವಾಡ ಸದೃಶ್ಯವಾಗಿ ಬದುಕಿ ಉಳಿದಿದ್ದರು. ಹಲವಾರು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಶಾಮರಾಜ್ ತೊಡಗಿಕೊಂಡಿದ್ದಾರೆ.

ಈ ಎರಡು ವಿಡಿಯೋಗಳು ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆ ಹೈವೇ ಅಥಾರಿಟಿ ಒಂದು ಸ್ಪಷ್ಟನೆ ನೀಡಿದೆ. ದೇಶಾದ್ಯಂತ ಹಾಲಿ ಸೈನಿಕರಿಗೆ ಟೋಲ್‌ಗಳಲ್ಲಿ ವಿನಾಯಿತಿ ಇದೆ. ನಿವೃತ್ತ ಸೈನಿಕರಿಗೆ ಟೋಲ್ ವಿನಾಯಿತಿ ವ್ಯವಸ್ಥೆ ಇರುವುದಿಲ್ಲ ಎಂದಿದೆ. ‘ಟೋಲ್ ಶುಲ್ಕ ವಿನಾಯಿತಿ ಅಧಿಕೃತ ಕರ್ತವ್ಯದಲ್ಲಿರುವ ಸೇನಾ ಸಿಬ್ಬಂದಿಗೆ ಮಾತ್ರ ಅನ್ವಯಿಸುತ್ತದೆ ಎಂದು NHAI ಸ್ಪಷ್ಟಪಡಿಸುತ್ತದೆ. ಈ ಸಂದರ್ಭದಲ್ಲಿ, ಬಳಕೆದಾರರು ಮಾಜಿ ಸೇನಾ ಸಿಬ್ಬಂದಿಯಾಗಿದ್ದು, ಸಲ್ಲಿಸಿದ ದಾಖಲೆಗಳು ನಿಗದಿತ ವಿನಾಯಿತಿ ಮಾನದಂಡಗಳನ್ನು ಪೂರೈಸದ ಕಾರಣ ಟೋಲ್ ಶುಲ್ಕ ನಿಯಮಗಳ ಅಡಿಯಲ್ಲಿ ಅರ್ಹರಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.