ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ ಎಚ್ ಆರ್ ಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಜೂನ್ 1 ರಂದು ಹುದ್ದೆಯಿಂದ ನಿವೃತ್ತರಾಗಿದ್ದರು. ನಂತರ ಖಾಲಿ ಇದ್ದ ಹುದ್ದೆಯನ್ನು ಇದೀಗ ಭರ್ತಿ ಮಾಡಲಾಗಿದೆ. ಎನ್‌ಎಚ್‌ಆರ್‌ಸಿ ಸದಸ್ಯೆ ವಿಜಯಭಾರತಿ ಸಯಾನಿ ಅವರು ಈ ಅವಧಿಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸುಪ್ರೀಂ ಕೋರ್ಟ್ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಮಾತುಗಳು ಕೇಳಿಬಂದಿದ್ದವು. ಆದರೆ ಇದನ್ನು ಅವರು ಬಲವಾಗಿ ನಿರಾಕರಿಸಿದ್ದು ವರದಿಯಾಗಿತ್ತು.
ಮದ್ರಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನ್ಯಾಯಮೂರ್ತಿ ರಾಮಸುಬ್ರಮಣಿಯನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸುಮಾರು 23 ವರ್ಷಗಳ ಕಾಲ ವಕೀಲಿಕೆ ಮಾಡಿದ್ದರು. ಜುಲೈ 31, 2006ರಂದು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು ನವೆಂಬರ್ 9, 2009 ರಂದು ಕಾಯಂಗೊಂಡಿದ್ದರು.
ಅವರ ಸ್ವಯಂ ಕೋರಿಕೆಯ ಹಿನ್ನೆಲೆಯಲ್ಲಿ ಏಪ್ರಿಲ್ 27, 2016 ರಂದು ಅವರನ್ನು ಹೈದರಾಬಾದ್‌ನ ಹೈಕೋರ್ಟ್‌ಗೆ ವರ್ಗ ಮಾಡಲಾಗಿತ್ತು.
ಈ ಹಿಂದಿನ ಆಂಧ್ರಪ್ರದೇಶ ರಾಜ್ಯದ ವಿಭಜನೆಯ ನಂತರ, ಅವರನ್ನು ಜನವರಿ 1, 2019ರಿಂದ ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿಯುಕ್ತಿ ಮಾಡಲಾಯಿತು. ತದನಂತರ ಅವರು ಜೂನ್ 22, 2019ರಿಂದ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಸೆಪ್ಟೆಂಬರ್ 23, 2019 ರಂದು ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಯಿತು. ಜೂನ್ 29, 2023ರಂದು ಅವರು ಸೇವೆಯಿಂದ ನಿವೃತ್ತರಾದರು.