ಮೈಸೂರು: ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಸಚಿವರಾದ ಕೆ.ಎಂ.ಶಶಿಧರ್ ಅವರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಲು ತಾತ್ಕಾಲಿಕವಾಗಿ ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಅಂತೆಯೇ ಕೆ.ಎಂ.ಶಶಿಧರ್ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ಸತ್ಯನಾರಾಯಣ ಆರ್.ಎನ್ ಒತ್ತಾಯಿಸಿದ್ದಾರೆ.
ಕರಾಮುವಿ ಕಚೇರಿ ಆದೇಶ ಸಂಖ್ಯೆ ಕರಾಮುವಿ/ಆವಿ/ಸಿಬ್ಬಂದಿ-02/1025/2022-23 ದಿನಾಂಕ 24.02-2023ರನ್ವಯ ಕೆ.ಎಂ.ಶಶಿಧರ್ ಅವರನ್ನು ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಲಾಗಿದೆ. ಕರ್ತವ್ಯದ ಮೇಲೆ ವರದಿ ಮಾಡಿಕೊಂಡ ದಿನಾಂಕದಿಂದ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಮಾಹೆಯಾನ ಗೌರವ ಸಂಭಾವನೆ 35 ಸಾವಿರ ರೂ ನಿಗಧಿಪಡಿಸುವುದರೊಂದಿಗೆ ಷರತ್ತುಗಳನ್ನು ವಿಧಿಸಿ ಆದೇಶ ನೀಡಲಾಗಿದೆ.
ಆದರೆ ಈ ನೇಮಕಾತಿ ಆದೇಶಕ್ಕೆ ಸಾಮಾಜಿಕ ಹೋರಾಟಗಾರ ಸತ್ಯನಾರಾಯಣ ಆರ್.ಎನ್ ಎಂಬುವವರು ಆಕ್ಷೇಪಣೆ ಸಲ್ಲಿಸಿದ್ದು, ಕರಾಮುವಿ ರಿಜಿಸ್ಟ್ರಾರ್ (ಆಡಳಿತ/ಸಾಮಾನ್ಯ) ಅವರಿಂದ ಸ್ಪಷ್ಟೀಕರಣ ಕೋರಿದ್ದಾರೆ.
ನಿವೃತ್ತಿ ಹೊಂದಿದ ನೌಕರರ ಪುನರ್ ನೇಮಕ ಮತ್ತು ಸರ್ಕಾರಿ ನೌಕರರ ನಿವೃತ್ತಿ ನಂತರ ಸೇವಾವಧಿಯನ್ನು ವಿಸ್ತರಿಸದಿರುವ ಬಗ್ಗೆ ಸರ್ಕಾರದ ಇಲಾಖೆಗಳಿಗೆ ಸೇರಿದಂತೆ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸ್ಪಷ್ಟ ನಿರ್ದೇಶನವನ್ನೂ ಸರ್ಕಾರದಿಂದ ನೀಡಲಾಗಿದೆ. ಆದಾಗ್ಯೂ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮ ಬಾಹಿರವಾಗಿ ಕೆ.ಎಂ.ಶಶಿಧರ ಅವರನ್ನು ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಶ್ವವಿದ್ಯಾಲಯದ ಕಾಯ್ದೆ 1992ರ ಎರಡನೇ ಅನುಸೂಚಿಯ ಮೊದಲನೇ ಪರಿನಿಯಮ 2(9)(iii)ರಲ್ಲಿ ಕುಲಪತಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಕರಾಮುವಿ/ಆವಿ/ಸಿಬ್ಬಂದಿ-02/1025/2022-23 ದಿನಾಂಕ 24.02-2023ರನ್ವಯ ಕೆ.ಎಂ.ಶಶಿಧರ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದು ಕುಲಪತಿಗಳು ಮತ್ತು ಕುಲಸಚಿವರ ಅಧಿಕಾರ ಮತ್ತು ಕರ್ತವ್ಯ ಲೋಪದ ಮೂಲಕ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸತ್ಯನಾರಾಯಣ ಆಪಾದಿಸಿದ್ದಾರೆ. ಈ ಬಗ್ಗೆ ಅವರು ಕುಲಸಚಿವರಲ್ಲಿ ಸ್ಪಷ್ಟನೆ ಕೋರಿದ್ದಾರೆ. ಜೊತೆಗೆ ಕೆ.ಎಂ.ಶಶಿಧರ್ ಅವರನ್ನು ಈ ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.