ಮೈಸೂರು: ಶಾಸಕ ತನ್ವೀರ್ ಸೇಠ್ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗಲು ನಿರ್ಧರಿಸಿರುವ ಹಿನ್ನೆಲೆ ಅವರ ಮೈಸೂರು ನಿವಾಸದ ಬಳಿ ರಾಜಕೀಯ ಹೈಡ್ರಾಮ ನಡೆದಿದ್ದು, ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ತನ್ವೀರ್ ಸೇಠ್ ಅವರ ಉದಯಗಿರಿ ನಿವಾಸಕ್ಕೆ ದೌಡಾಯಿಸಿದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಓರ್ವ ಅಭಿಮಾನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಬಾಟಲಿಯನ್ನು ಉದಯಗಿರಿ ಠಾಣಾ ಪೊಲೀಸರು ಕಿತ್ತೆಸೆದಿದ್ದಾರೆ.
ಇಕ್ಬಾಲ್ ಎಂಬುವವರು ಮನೆ ಮೇಲೆ ಹತ್ತಿ ಧುಮುಕಲು ಯತ್ನಿಸಿದಾಗ ಕೆಲವರು ತಡೆದರು. ತನ್ವೀರ್ ಸೇಠ್ ಕಾರ್ಯಕರ್ತರನ್ನು ಸಮಾಧಾನಿಸಲು ಹೈರಾಣಾದರು.
ಕೆಲವರು ಗದ್ಗದಿತರಾಗಿ, ರಾಜಕೀಯ ನಿವೃತ್ತಿ ಪಡೆಯಬಾರದು. ನಮ್ಮನ್ನು ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದರು.
ಶಾಸಕ ತನ್ವೀರ್ ಸೇಠ್ ತಮ್ಮ ನಿಲುವು ಬದಲಿಸಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಇಲ್ಲವಾದರೆ ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಬೆಂಬಲಿಗರು ಬೆದರಿಕೆ ಹಾಕಿದ್ದಾರೆ.