ಬೆಂಗಳೂರು: ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ರೇವಣ್ಣ, ವಿಶೇಷ ತನಿಖಾ ತಂಡವು (ಎಸ್‌ಐಟಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ 2,144 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಎಸ್‌ಐಟಿ ತನಿಖಾಧಿಕಾರಿ ಬಿ. ಸುಮರಾಣಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಶಾಸಕ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ 150 ಸಾಕ್ಷಿದಾರರನ್ನು ಒಳಗೊಂಡಿರುವ 2,144 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದರು. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧದ ಮೊದಲ ಚಾರ್ಜ್‌ಶೀಟ್ ಇದಾಗಿದೆ.
ರೇವಣ್ಣ ಮೇಲಿನ ದೋಷಾರೋಪಣೆ
ಹೊಳೆನರಸೀಪುರದ ಹಿಂದುಳಿದ ವರ್ಗಗಳ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸಕ್ಕೆ ಸಹಾಯಕರಾಗಿ ಪ್ರಕರಣದ ಸಂತ್ರಸ್ತೆ ಹಾಗೂ ಸಾಕ್ಷಿ-1 ನೇಮಿಸಲ್ಪಟ್ಟಿದ್ದರು. ಸಂತ್ರಸ್ತೆ ಹಾಸ್ಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೂ ಎಚ್.ಡಿ.ರೇವಣ್ಣ ತಮ್ಮ ಪತ್ನಿ ಭವಾನಿ ರೇವಣ್ಣ ಶಿಫಾರಸಿನ ಮೇರೆಗೆ 2019ರಿಂದ 2022ರ ವರೆಗೆ ಮನೆ ಕೆಲಸಕ್ಕೆ ಸಂತ್ರಸ್ತೆಯನ್ನು ಬಳಸಿಕೊಂಡಿದ್ದರು.
2020ರಲ್ಲಿ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು ರೇವಣ್ಣ, ಸಂತ್ರಸ್ತೆಯನ್ನು ತಮ್ಮ ಕೊಠಡಿಗೆ ಬಾರಮ್ಮ ಏಕೆ ಕೆಳಗೆ ಹೋಗುತ್ತೀಯ, ನಾನೇನು ಮಾಡಲ್ಲ ಬಾ ಎಂದು ಆಗಾಗ ಕರೆಯುತ್ತಿದ್ದರು. ಕೆಲಸದವರಿಗೆ ಹಣ್ಣು ಕೊಡುವ ನೆಪದಲ್ಲಿ ಮನೆಯ ಮೊದಲ ಮಹಡಿಯ ಸ್ಟೋರ್ ರೂಮ್‌ಗೆ ಕರೆಸಿಕೊಳ್ಳುತ್ತಿದ್ದರು.
ಒಬ್ಬೊಬ್ಬರಿಗೂ ಹಣ್ಣು ಕೊಟ್ಟು ರೂಮಿನಿಂದ ಹೊರಗಡೆ ಕಳುಹಿಸುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲೆಂದು ಇರಿಸಿಕೊಳ್ಳುತ್ತಿದ್ದರು. ಸಂತ್ರಸ್ತೆಯ ಇಚ್ಛೆಯ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈಕೈ ಮುಟ್ಟಿ, ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ತನಿಖಾಧಿಕಾರಿಗಳು ಉಲ್ಲೇಖೀಸಿದ್ದಾರೆ.
ರೇವಣ್ಣ ಹಾಗೂ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಹೊಳೆನರಸೀಪುರದ ಮನೆಯ ಮೊದಲ ಮಹಡಿಯಲ್ಲಿ ಸಂತ್ರಸ್ತೆಯು ಕೆಲಸ ಮಾಡುತ್ತಿದ್ದಾಗ ಪ್ರಜ್ವಲ್ ರೇವಣ್ಣ ಸಂತ್ರಸ್ತೆಯ ಸೀರೆಯ ಸೆರಗನ್ನು ಎಳೆದಾಡುತ್ತಿದ್ದರು. ಅಡುಗೆ ಕೊಣೆಯಲ್ಲಿ ಇತರೇ ಕೆಲಸಗಾರರು ಇಲ್ಲದಿದ್ದಾಗ ಸಮಯ ನೋಡಿ ಲೈಂಗಿಕ ದುರುದ್ದೇಶದಿಂದ ಸಂತ್ರಸ್ತೆಯ ಹೊಟ್ಟೆ ಹಿಚುಕುವುದು, ತಬ್ಬಿಕೊಳ್ಳುವುದು, ಕಿವಿಯ ಹತ್ತಿರ ಬಾ ಎಂದು ಕರೆಯುತ್ತಿದ್ದರು. ಹಲವು ಬಾರಿ ಫೋನ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಈಗ ನಡೆದಿರುವಂತಹ ವಿಚಾರ ಯಾರಿಗಾದರೂ ಬಾಯಿ ಬಿಟ್ಟರೆ ನಿನ್ನನ್ನು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಹಲವು ಮಹಿಳೆಯರ ವೀಡಿಯೋ ಮಾಡಿದ್ದ ಪ್ರಜ್ವಲ್
ಪ್ರಜ್ವಲ್ ರೇವಣ್ಣ ತಾಯಿ ಹಾಗೂ ಮಗಳ ಅರಿವಿಗೆ ಬಾರದಂತೆ ಅವರ ನಗ್ನ ದೇಹವನ್ನು ಅವರ ಒಪ್ಪಿಗೆ ಇಲ್ಲದೆಯೇ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ತಮ್ಮ ಪ್ರಭಾವ ಬಳಸಿ ಬೇರೆಬೇರೆ ಸಂತ್ರಸ್ತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆ ಸಮಯದಲ್ಲಿ ತಾನು ಬಳಸುತ್ತಿದ್ದ ಮೊಬೈಲ್‌ನಲ್ಲಿ ಅದೆಲ್ಲವನ್ನು ಚಿತ್ರೀಕರಿಸಿಕೊಂಡಿದ್ದಾರೆ.
ಈ ಮಾಹಿತಿ ಕ್ಷೇತ್ರದ ಜನರಲ್ಲಿ ಹರಡುತ್ತಿದ್ದಂತೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಪಲಾಯನಗೈದು ಮೊಬೈಲ್ ಸಾಕ್ಷ್ಯ ನಾಶಪಡಿಸಿದ್ದಾರೆ. ಈ ಹಿಂದೆಯೂ ಪ್ರಜ್ವಲ್ ತಾವು ಬಳಸಿದ್ದ ಫೋನ್‌ಗಳಲ್ಲಿ ವಿದ್ಯುನ್ಮಾನ ಸಾಕ್ಷಿಗಳನ್ನು ನಾಶ ಪಡಿಸಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ಸಂತ್ರಸ್ತೆ ಮಗಳ ಮೇಲೂ ದೌರ್ಜನ್ಯ
ಪ್ರಜ್ವಲ್ ರೇವಣ್ಣ 2020-21ರಲ್ಲಿ ಮನೆ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯ ಮಗಳಿಗೆ ವಾಟ್ಸ್‌ಆ್ಯಪ್ ವೀಡಿಯೋ ಕರೆ ಮಾಡಿ ಎದೆಭಾಗ ತೋರಿಸುವಂತೆ ಒತ್ತಾಯಪಡಿಸಿದ್ದರು. ಸಂತ್ರಸ್ತೆಯ ಮಗಳು ನಿರಾಕರಿಸಿದಾಗ ತಾಯಿ ಮತ್ತು ನಿನ್ನ ಗಂಡನ ಮನೆಯವರಿಗೆ ನೀನು ನನ್ನ ಜತೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಹೇಳುವೆ ಅಂತ ಹೆದರಿಸಿದ್ದರು. ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
* ಪತ್ನಿ ಭವಾನಿ ಇಲ್ಲದಾಗ ಸಂತ್ರಸ್ತೆಯನ್ನು ಕೊಠಡಿಗೆ ಕರೆಯುತ್ತಿದ್ದ ಎಚ್.ಡಿ.ರೇವಣ್ಣ
* ಹಣ್ಣು ಕೊಡುವ ನೆಪದಲ್ಲಿ ಕೈಹಿಡಿದು ಎಳೆದು, ಮೈಕೈ ಮುಟ್ಟಿ ಲೈಂಗಿಕ ಕಿರುಕುಳ
* ರೇವಣ್ಣ, ಭವಾನಿ ಇಲ್ಲದಾಗ ಸಂತ್ರಸ್ತೆಯ ಸೀರೆ ಸೆರಗು ಎಳೆಯುತ್ತಿದ್ದ ಪ್ರಜ್ವಲ್
* ಬೆಂಗಳೂರಿನಲ್ಲಿ ಅತ್ಯಾಚಾರ ನಡೆಸಿ ವೀಡಿಯೋ ಮಾಡಿಕೊಂಡಿರುವ ಪ್ರಜ್ವಲ್
* ಸಂತ್ರಸ್ತೆಯ ಮಗಳಿಗೂ ವಾಟ್ಸ್‌ಆ್ಯಪ್ ಕರೆ ಮಾಡಿ ಪ್ರಜ್ವಲ್‌ರಿಂದ ಲೈಂಗಿಕ ಕಿರುಕುಳ
ಪತ್ನಿ ಮನೆಯಲ್ಲಿಲ್ಲದಿದ್ದಾಗ ಸಂತ್ರಸ್ತೆಗೆ ರೇವಣ್ಣ ಕಿರುಕುಳ ವಿದ್ಯಾರ್ಥಿ ನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಕೆಲಸಕ್ಕೆ ಸಹಾಯಕರಾಗಿದ್ದ ಪ್ರಕರಣದ ಸಂತ್ರಸ್ತೆ ರೇವಣ್ಣ ಮನೆಯಲ್ಲೂ ಕೆಲಸ ಮಾಡುತ್ತಿದ್ದರು. 2020ರಲ್ಲಿ ಭವಾನಿ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿ ರೇವಣ್ಣ, ಸಂತ್ರಸ್ತೆಯನ್ನು ಉಪಾಯದಿಂದ ತಮ್ಮ ಕೊಠಡಿಗೆ ಕರೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.