ಬೆಂಗಳೂರು: ಆಸ್ತಿ ಖರೀದಿ, ಮಾರಾಟ ಸೇರಿ ನೋಂದಣಿ ಪ್ರಕ್ರಿಯೆಗೆ ಬಳಸುವ ಕಾವೇರಿ 2.0 ಸಾಫ್ಟ್ವೇರ್ ಅನ್ನು ಅಪರಿಚಿತರು ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನೊಂದಣಿ ಮಹಾ ನಿರೀಕ್ಷಕ (ಐಜಿಆರ್) ಕೆ.ಎ.ದಯಾನಂದ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸರ್ವರ್ ಸಮಸ್ಯೆೆಯಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಕಾರ್ಯ ಸ್ಥಗಿತಗೊಂಡಿತ್ತು. ಈ ಹಿನ್ನೆೆಲೆಯಲ್ಲಿ ಐಜಿಆರ್ ಪರಿಶೀಲಿಸಿದಾಗ ದುರುದ್ದೇಶದಿಂದ ಅಪರಿಚಿತರು ಕಾವೇರಿ 2.0 ಸಾಫ್ಟ್ವೇರ್ ಅನ್ನು ಹ್ಯಾಕ್ ಮಾಡಿ, ವೆಬ್‌ಸೈಟ್ ಪ್ರವೇಶಿಸಿ ಅದರಲ್ಲಿರುವ ಡೇಟಾಗಳನ್ನು ಕಳವು ಮಾಡಲು ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ. ಈ ಕುರಿತು ಸ್ಮಾರ್ಟ್ ಗವರ್ನನೆನ್ಸ್ ಸೆಂಟರ್ (ಸಿಎಸ್‌ಜಿ) ಈ ರೀತಿಯ 62 ಇ-ಮೇಲ್ ಖಾತೆಗಳು ಹಾಗೂ ಅವುಗಳ ಐಪಿ ವಿಳಾಸಗಳ ಪಟ್ಟಿಯನ್ನು ನೀಡಿದೆ.
ಕಳೆದ ತಿಂಗಳು ಸೈಬರ್ ದಾಳಿಕೋರರು ಹ್ಯಾಕ್ ಮಾಡಿದ್ದು, ಕಾವೇರಿ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆೆ ಉಂಟಾಗಿತ್ತು. ಆಗ ಸಾಮಾನ್ಯ ದಿನಗಳಿಗಿಂತ 8 ಪಟ್ಟು ಹೆಚ್ಚಾಗಿತ್ತು. ಕೆಲವು ಹಂತಗಳಲ್ಲಿ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ದುರುದ್ದೇಶಪೂರಿತ ಬಳಕೆದಾರರಿಂದ 6.2 ಲಕ್ಷ ವಿನಂತಿಗಳನ್ನು ಸ್ವೀಕರಿಸಲಾಗಿದೆ ಎಂದು ಸಿಎಸ್‌ಜಿ ವರದಿ ನೀಡಿತ್ತು. ಸರ್ಕಾರಿ ವೆಬ್‌ಸೈಟ್‌ಗಳನ್ನು ಗುರಿಯಾಗಿಕೊಂಡು ಸೈಬರ್ ದಾಳಿ ನಡೆದಿದೆ. ಹೀಗಾಗಿ, ಸರ್ಕಾರ ವೆಬ್‌ಸೈಟ್ ಹ್ಯಾಕ್ ಮಾಡಿದ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಯಾನಂದ್ ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಸಿಇಎನ್ ಠಾಣೆ ಪೊಲೀಸರು ಹೇಳಿದ್ದಾರೆ.