ಹಾರರ್ ಸಿನಿಮಾ ಎಂದಾಗ ಸಾಮಾನ್ಯವಾಗಿ ಬರುವ ಯೋಚನೆ ಎಂದರೆ ಅದು ದ್ವೇಷದ ಕಥೆ ಎಂಬುದು. ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಸುತ್ತುತ್ತಿರುವ ಆತ್ಮವೇ ಬಹುತೇಕ ಹಾರರ್ ಸಿನಿಮಾದ ಮೂಲ ಅಂಶ. ಆದರೆ, ಈ ವಾರ ತೆರೆಕಂಡಿರುವ “ನಾ ನಿನ್ನ ಬಿಡಲಾರೆ’ ಚಿತ್ರ ಮಾತ್ರ ಇದನ್ನು ಬಿಟ್ಟು ಕೊಂಚ ವಿಭಿನ್ನವಾಗಿ ಯೋಚನೆ ಮಾಡಿದೆ. ಈ ಮೂಲಕ ಹಾರರ್‌ನಲ್ಲಿ ಹೊಸದೇನನ್ನೋ ಹೇಳಲು ಪ್ರಯತ್ನಿಸಿದ್ದಾರೆ.
ಒಂದು ಮನೆ, ಅದರೊಳಗೆ ಹೋದ ವರಿಗೆ ಆಗುವ ಭಯಾನಕ ಅನುಭವ, ಕಿರುಚಾಟ, ಅರಚಾಟ… ಇಂತಹ ಸಾಮಾನ್ಯ ಅಂಶಗಳೊಂದಿಗೆ ಆರಂಭವಾಗುವ ಸಿನಿಮಾ ಇಂಟರ್‌ವಲ್‌ವರೆಗೆ ಒಂದಷ್ಟು ಸಮಯ ವ್ಯಯಿಸಿದರೆ, ನಿಜವಾದ ಕಥೆ ಹಾಗೂ ಚಿತ್ರದ ಸಾಮರ್ಥ್ಯ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ಇಡೀ ಸಿನಿಮಾ ಹೊಸ ರೂಪ ಪಡೆದುಕೊಳ್ಳುತ್ತದೆ. ರೆಗ್ಯುಲರ್ ಅಲ್ಲದ ಒಂದು ಹಾರರ್ ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ಮುಖ್ಯವಾಗಿ ಈ ಚಿತ್ರದ ಕಥೆಯೇ ಭಿನ್ನವಾಗಿದೆ. ಈ ಕಥೆಗೊಂದು ರೋಗ, ವೈದ್ಯಕೀಯ ಹಿನ್ನೆಲೆಯೂ ಇದೆ. ಇಲ್ಲಿ ಇಡೀ ಸಿನಿಮಾವನ್ನು ಯಾವುದೇ ಗೊಂದಲವಿಲ್ಲದಂತೆ ಕಟ್ಟಿಕೊಡುವ ಮೂಲಕ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.
“ನಾ ನಿನ್ನ ಬಿಡಲಾರೆ’ ಟೈಟಲ್ ಇಟ್ಟಿದ್ದಕ್ಕೂ ಸಿನಿಮಾದ ಕಥೆಗೂ ಹೊಂದಾಣಿಕೆ ಇದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಾಯರ ಮಹಿಮೆಯನ್ನೂ ಹೇಳಲಾಗಿದೆ. ಜೊತೆಗೆ ಮುಂದಿನ ಭಾಗ ಮಾಡುವ ಅವಕಾಶ ದೊಂದಿಗೆ ಚಿತ್ರವನ್ನು ಮುಗಿಸಿದ್ದಾರೆ.
ಕೆಲವು ಕಡೆ ಕಂಟಿನ್ಯೂಟಿ ಸೇರಿದಂತೆ ಸಣ್ಣಪುಟ್ಟ ತಪ್ಪುಗಳು ಎದ್ದು ಕಾಣುತ್ತವೆ. ಅದರ ಹೊರತಾಗಿ ಒಂದು ಪ್ರಯತ್ನವಾಗಿ “ನಾ ನಿನ್ನ ಬಿಡಲಾರೆ’ ಮೆಚ್ಚುಗೆ ಪಡೆಯುತ್ತದೆ.
ಚಿತ್ರದಲ್ಲಿ ನಾಯಕಿಯಾಗಿ ಅಂಬಾಲಿ ಭಾರತಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗಿದ್ದು, ಅದಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಪಂಚಿ, ಕೆ.ಎಸ್ ಶ್ರೀಧರ್, ಶ್ರೀನಿವಾಸ್ ಪ್ರಭು, ರಘು ನಟಿಸಿದ್ದಾರೆ.