ಮನೆ ಕಾನೂನು ನಾಮಪತ್ರ ಸಲ್ಲಿಕೆಗೆ ಕೊನೆ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ: ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದ...

ನಾಮಪತ್ರ ಸಲ್ಲಿಕೆಗೆ ಕೊನೆ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ: ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದ ವಿಭಾಗೀಯ ಪೀಠ

0

ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯ ಪ್ರಕಟಿಸಿದ ನಂತರವೂ ಪರಿಷ್ಕರಣೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಅನುಮತಿಸಿದ್ದ ಏಕಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

Join Our Whatsapp Group

ಏಕಸದಸ್ಯ ಪೀಠದ ಆದೇಶ ರದ್ದತಿ ಕೋರಿ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತು.

ಶಿವಾಜಿನಗರ ವಿಧಾನಸಭಾ ಕ್ಷೇತದ ಅಂತಿಮ ಮತದಾರರ ಪಟ್ಟಿಯನ್ನು 2023ರ ಜನವರಿ 15ರಂದು ಪ್ರಕಟಿಸಲಾಗಿತ್ತು. ಕ್ಷೇತ್ರದಿಂದ ಸ್ಥಳಾಂತರಗೊಂಡ ಮತ್ತು ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಇದರಿಂದ ಹೈಕೋರ್ಟ್ ಸೂಚನೆಯಂತೆ ಸ್ಥಳಾಂತರಗೊಂಡವರ ಹಾಗೂ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಆರಂಭಿಸಿತ್ತು.

ಇದರ ಭಾಗವಾಗಿ ಕ್ಷೇತ್ರದಿಂದ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯಿಂದ ಶಾಸಕ ರಿಜ್ವಾನ್ ಅರ್ಷದ್ ಹೆಸರು ತೆಗೆಯುವ ವಿಚಾರವಾಗಿ ನೋಟಿಸ್ ನೀಡಲಾಗಿತ್ತು. ಅದನ್ನು ಆಕ್ಷೇಪಿಸಿ ಹೈಕೋರ್ಟ್ಗೆ ಮೆಟ್ಟಿಲೇರಿದ್ದ ಶಾಸಕ ರಿಜ್ವಾನ್, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಪರಿಷ್ಕರಣೆ ಮಾಡಲು ಅವಕಾಶವಿಲ್ಲ ಎಂದು ವಾದಿಸಿದ್ದರು.

ಆ ಅರ್ಜಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠವು ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ, ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರನ್ನು ಆ ಕ್ಷೇತ್ರದ ಮತದಾರರ ಪಟ್ಟಿಯಿಂದ ತೆಗೆದುಹಾಕುವಂತಹ ಕಾರ್ಯವಾಗಬಾರದು. ಇಂತಹ ವಿಚಾರಗಳಲ್ಲಿ ಚುನಾವಣಾ ಆಯೋಗ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಪೀಠ ಸಲಹೆ ನೀಡಿತ್ತು.