ಗಂಡು ಹೆಣ್ಣಿನ ವಿಭಿನ್ನ ಜೈವಿಕ ಮತ್ತು ಶಾರೀರಿಕ ಗುಣಲಕ್ಷಣಗಳನ್ನು ಸೂಚಿಸುವ ಲಿಂಗಕ್ಕೂ (ಸೆಕ್ಸ್) ಹಾಗೂ ಮಹಿಳೆಯರು ಮತ್ತು ಪುರುಷರಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ರೂಪುಗೊಳ್ಳುವ ಲಿಂಗತ್ವಕ್ಕೂ (ಜೆಂಡರ್) ಇರುವ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸೋಮವಾರ ಪ್ರಮುಖ ಅವಲೋಕನಗಳನ್ನು ಮಾಡಿತು.
ಸಾಮಾನ್ಯ ಮಾತುಕತೆಯ ವೇಳೆ ಲಿಂಗತ್ವ (ಜೆಂಡರ್) ಮತ್ತು ಜೈವಿಕ ಲಿಂಗ (ಸೆಕ್ಸ್) ಅನ್ನು ಪರಸ್ಪರ ಬದಲಿಯಾಗಿ ಆಗಾಗ ಬಳಸಲಾಗುತ್ತದೆ. ಆದರೆ ಅವು ಭಿನ್ನ ಪರಿಕಲ್ಪನೆಗಳಾಗಿವೆ ಎಂದು ನ್ಯಾಯಮೂರ್ತಿ ವಿ ಜಿ ಅರುಣ್ ವಿವರಿಸಿದರು.
“… ಅವು ವಾಸ್ತವವಾಗಿ ಮಾನವನ ಅಸ್ಮಿತೆ ಮತ್ತು ಜೈವಿಕತೆಗೆ ಸಂಬಂಧಿಸಿದ ಎರಡು ವಿಭಿನ್ನ ಪರಿಕಲ್ಪನೆಗಳು. ಲಿಂಗ (ಸೆಕ್ಸ್) ಎಂಬುದು ವ್ಯಕ್ತಿಯ ಜೈವಿಕ ವಿಶೇಷವಾಗಿ ಅವರ ಸಂತಾನೋತ್ಪತ್ತಿ ಅಂಗರಚನೆ ಮತ್ತು ಕ್ರೋಮೋಸೋಮ್‌ಗಳಿಗೆ ಸಂಬಂಧಿಸಿದ ಗುಣಲಕ್ಷಣಗಳನ್ನು ಸೂಚಿಸುತ್ತದೆ, ಮತ್ತೊಂದೆಡೆ, ಲಿಂಗತ್ವವು (ಜೆಂಡರ್) ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯಾಗಿದ್ದು, ಇದು ಗಂಡು-ಹೆಣ್ಣು ಅಥವಾ ಇಬ್ಬರದ್ದೂ ಅಲ್ಲದ ಪಾತ್ರ, ನಡವಳಿಕೆ, ನಿರೀಕ್ಷೆ ಮತ್ತು ಅಸ್ಮಿತೆಗಳನ್ನು ಒಳಗೊಳ್ಳುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಅಂತರ್ ಲಿಂಗೀಯ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ತೀರ್ಪಿನಲ್ಲಿ, ನ್ಯಾಯಾಲಯ ನಾಲ್ಸಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿತು.
“ಒಂದು ವೇಳೆ ಪ್ರಜಾಪ್ರಭುತ್ವವು ಮನುಷ್ಯನ ಅನನ್ಯತೆ ಮತ್ತು ಘನತೆಯನ್ನು ಆಧರಿಸಿದ್ದರೆ, ಆಗ ಸ್ವ-ನಿರ್ಣಯ, ಘನತೆ ಮತ್ತು ಸ್ವಾತಂತ್ರ್ಯದ ಮೂಲಭೂತ ಅಂಶಗಳಲ್ಲಿ ಒಂದಾದ ಆತನ ಅಥವಾ ಆಕೆಯ ಲಿಂಗ (ಸೆಕ್ಸ್) ಅಥವಾ ಲಿಂಗತ್ವ ಅಸ್ಮಿತೆಯನ್ನು (ಜೆಂಡರ್ ಐಡೆಂಟಿಟಿ) ಆಯ್ಕೆ ಮಾಡುವ ಮಾನವನ ಹಕ್ಕನ್ನು ಗುರುತಿಸಬೇಕಾಗುತ್ತದೆ. ವ್ಯತಿರಿಕ್ತವಾಗಿ, ಲಿಂಗ ಅಥವಾ ಅಸ್ಮಿತೆಯನ್ನು ಆಯ್ಕೆ ಮಾಡುವ ವ್ಯಕ್ತಿಗಳ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಿದರೆ ಖಂಡಿತವಾಗಿಯೂ ಆಗ ಆ ವ್ಯಕ್ತಿಗಳ ಗೌಪ್ಯತೆ, ಘನತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆಯೊದಗುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ.
ಅಂತರ್‌ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ- 2019ರ ನಿಯಮಾವಳಿಯನ್ನು ಪ್ರಸ್ತಾಪಿಸುವಾಗ ಪೀಠ “ಲಿಂಗ ಆಯ್ಕೆ ಮಾಡುವ ಹಕ್ಕನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ನೀಡಲಾಗಿದೆಯೇ ವಿನಾ ಬೇರಾರಿಗೋ ಅಥವಾ ನ್ಯಾಯಾಲಯಕ್ಕೋ ಅಲ್ಲ” ಎಂದು ಹೇಳಿದೆ.
ಅಂತರ್ ಲಿಂಗಿ ವ್ಯಕ್ತಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಯತ್ನದಲ್ಲಿ, ನ್ಯಾಯಮೂರ್ತಿ ಅರುಣ್ ಅವರು ಸಾರಾ ಕ್ರೌಸ್ ಅವರ ‘ಐ ಆಮ್ ಫ್ಲೂಯಿಡ್’ ಕವಿತೆಯ ಕೆಲವು ಸಾಲುಗಳನ್ನು ಉದ್ಗರಿಸಿದರು. ಇದು ಅಂತರ್‌ಲಿಂಗಿ ಮನಸ್ಸುಗಳನ್ನು ವ್ಯಾಖ್ಯಾನಿಸುವ ಸುಂದರ ಪ್ರಯತ್ನ ಎಂದು ತಾನು ನಂಬುವುದಾಗಿ ಅವರು ಹೇಳಿದರು.
ಅಸ್ಪಷ್ಟ ಜನನಾಂಗದೊಂದಿಗೆ ಜನಿಸಿದ 7 ವರ್ಷದ ಮಗುವಿನ ಪೋಷಕರು, ಮಗುವನ್ನು ಹೆಣ್ಣಾಗಿ ಬೆಳೆಸಲು ಜನನಾಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು. ವೈದ್ಯರು ಜನನಾಂಗ ಪರಿವರ್ತನೆಗೆ ಸಲಹೆ ನೀಡಿದ್ದರೂ, ಸಂಬಂಧಪಟ್ಟ ನ್ಯಾಯಾಲಯದಿಂದ ಆದೇಶವಿಲ್ಲದೆ ಶಸ್ತ್ರಚಿಕಿತ್ಸೆ ನಡೆಸಲು ನಿರಾಕರಿಸಿದ್ದರು.