ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್’ನಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್’ಗೆ ಭಾರತ ಆತಿಥ್ಯವಹಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇದಕ್ಕಾಗಿ ಬಿಸಿಸಿಐ ಸರ್ವ ತಯಾರಿಯನ್ನು ಈಗಾಗಲೇ ಆರಂಭಿಸಿದೆ. ಅಲ್ಲದೆ ಈಗ ನಡೆಯುತ್ತಿರುವ ಐಪಿಎಲ್’ನಲ್ಲಿ ಆಟಗಾರರ ಪ್ರದರ್ಶನದ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ, ವಿಶ್ವಕಪ್ ಗೆ ತಂಡದ ಆಯ್ಕೆ ಮೇಲೆ ಗಮನಹರಿಸಲಾಗಿದೆ.
ಈಗಾಗಲೇ ಏಕದಿನ ವಿಶ್ವಕಪ್ ಗೆ 20 ಆಟಗಾರರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ, ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ರಿಷಭ್ ಪಂತ್, ಸೆಪ್ಟೆಂಬರ್’ನಲ್ಲಿ ನಡೆಯಲಿರುವ ಏಷ್ಯಾಕಪ್ , ಆನಂತರ ನಡೆಯಲ್ಲಿರುವ ಏಕದಿನ ವಿಶ್ವಕಪ್ನಿಂದಲೂ ಹೊರಗುಳಿಯಲಿದ್ದಾರೆ ಎಂದು ಕ್ರಿಕ್ಬಝ್ ತನ್ನ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ಕಾರು ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ ಪಂತ್ ಸದ್ಯ ಶಸ್ತ್ರಚಿಕಿತ್ಸೆಗಾಗಿ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಐಪಿಎಲ್ನಲ್ಲಿಯೂ ಆಡುತ್ತಿಲ್ಲ. ಅಲ್ಲದೆ ಈ ಕಾರಣದಿಂದಾಗಿ ಪಂತ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿಲ್ಲ. ಹಾಗೆಯೇ ಜೂನ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿಯೂ ಪಂತ್ ಕಣಕ್ಕಿಳಿಯುತ್ತಿಲ್ಲ. ಇದು ಟೀಂ ಇಂಡಿಯಾಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ. ಏಕೆಂದರೆ ಪಂತ್ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದರು.
ಪಂತ್ ಎಷ್ಟೇ ಶೀಘ್ರವಾಗಿ ಚೇತರಿಸಿಕೊಂಡರೂ ಏಕದಿನ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, ಪಂತ್ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕನಿಷ್ಠ ಏಳೆಂಟು ತಿಂಗಳು ಬೇಕು. ಅಥವಾ ಇದಕ್ಕಿಂತಲೂ ಇನ್ನೂ ಹೆಚ್ಚಿನ ಸಮಯ ಬೇಕು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಆಪ್ತ ಮೂಲಗಳ ಪ್ರಕಾರ ಪಂತ್ ಮುಂದಿನ ಜನವರಿ ಬಳಿಕವೇ ತಂಡಕ್ಕೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ತಿಳಿದುಬಂದಿದೆ.
ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಪಂತ್ಗೆ ಬಿಸಿಸಿಐ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಅಪಘಾತದ ಸಮಯದಲ್ಲಿ ಗಂಭೀರವಾದ ಗಾಯಗಳಿಗೆ ತುತ್ತಾಗಿದ್ದ ಪಂತ್ ಈ ವರ್ಷದ ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರ ಸಂಪೂರ್ಣ ವೆಚ್ಚವನ್ನು ಬಿಸಿಸಿಐ ಬರಿಸಿತ್ತು. ಅಲ್ಲದೆ ಪಂತ್ ಆರೋಗ್ಯದ ಮೇಲೆ ಕಾಳಜಿ ಇಟ್ಟಿರುವ ಬಿಸಿಸಿಐ ಅವರಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುತ್ತಿದೆ. ಪಂತ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.