ಮನೆ ಸುದ್ದಿ ಜಾಲ ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕರ್ಮಕಾಂಡ: ಒಂದೇ ದಿನ ಕೇರಳದವರಿಗೆ 150 ಎಲ್ ಎಲ್...

ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕರ್ಮಕಾಂಡ: ಒಂದೇ ದಿನ ಕೇರಳದವರಿಗೆ 150 ಎಲ್ ಎಲ್ ಆರ್ ವಿತರಣೆ

0


ಹುಣಸೂರು: ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಕರ್ಮಕಾಂಡ ಮತ್ತೆ ಬೆಳಕಿಗೆ ಬಂದಿದ್ದು, ಲಂಚ ಪಡೆದು ಒಂದೇ ದಿನ ಕೇರಳದ 150 ಮಂದಿಗೆ ಅಕ್ರಮವಾಗಿ ಎಲ್ ಎಲ್ ಆರ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Join Our Whatsapp Group

ಹುಣಸೂರು ಪ್ರಾದೇಶಿಕ ಸಾರಿಗೆ ಇಲಾಖೆ ಭ್ರಷ್ಟಾಚಾರದ ಬೆನ್ನತ್ತಿ ಇತ್ತೀಚಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತೆ ಲಂಚಕ್ಕೆ ಕೈ ಚಾಚಿದ್ದಾರೆ.
ಒಂದು ಎಲ್ ಎಲ್ ಆರ್ ಗೆ 1 ಸಾವಿರ ರೂ. ಪಡೆದು ಒಂದೇ ದಿನ 150 ಎಲ್ ಎಲ್ ಆರ್ ಗಳನ್ನು ನೀಡಿದ್ದಾರೆ. ಕೇರಳದವರಿಗೆ ನಮ್ಮ ಬಳಿ ತರಬೇತಿ ಪಡೆದಿದ್ದಾರೆಂದು ಫಾರ್ಮ್ 14 ರ ಅಡಿಯಲ್ಲಿ ಎಲ್ ಎಲ್ ಆರ್ ನೀಡಿದ್ದಾರೆ.

ಅಂತರ್ ರಾಜ್ಯ ನಾಗರಿಕರಿಗೆ ಎಲ್ ಎಲ್ ಆರ್ ನೀಡಲು ಕೆಲವು ನಿಯಮಗಳಿದ್ದು, ಒಂದು ತಿಂಗಳು ತರಬೇತಿ ಪಡೆಯಬೇಕು. ಸ್ಥಳೀಯವಾಗಿ ವಾಸವಾಗಿರುವುದಕ್ಕೆ ದಾಖಲೆಗಳನ್ನು ನೀಡಬೇಕು. ಸರಿಯಾಗಿ ವಾಹನ ಚಲಾಯಿಸಲು ತಿಳಿದಿರಬೇಕು. ನಿಯಮವಿದ್ದರೂ ಕೂಡ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಿರುವುದಕ್ಕೆ ಯಾವುದೇ ದಾಖಲೆ ಒದಗಿಸದ, ಕೇರಳ ಮೂಲದ ವ್ಯಕ್ತಿಗಳಿಗೆ ಎಲ್ ಎಲ್ ಆರ್ ವಿತರಿಸಿರುವುದು ವಿಪರ್ಯಾಸವೇ ಸರಿ.

ಎಲ್ ಎಲ್ ಆರ್ ಪಡೆಯಲು ಆನ್ ಲೈನ್ ನಲ್ಲಿ ಸಲ್ಲಿಸಿದ ದಾಖಲೆಗಳನ್ನು ತೆಗೆದುಕೊಂಡು ಬಂದು ಸೂಪರಿಡೆಂಟ್ ಬಳಿ ನೇರವಾಗಿ ಹಾಜರಾಗಬೇಕು. ಸೂಪರಿಡೆಂಟ್ ಪರಿಶೀಲನೆ ಮಾಡಬೇಕು. ಪರಿಶೀಲಿಸಿದ ನಂತರವೇ ಎಲ್ ಎಲ್ ಆರ್ ನೀಡಬೇಕು. ಆದರೆ ಕೆಲವು ಡ್ರೈವಿಂಗ್ ಸ್ಕೂಲ್ ಗಳ ಮುಖಾಂತರ ಬಂದ ಅರ್ಜಿಯನ್ನು ಪರಿಶೀಲನೆ ನಡೆಸದೇ ಹಣ ಪಡೆದು ಎಲ್ ಎಲ್ ಅರ್ ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಎಲ್ ಎಲ್ ಆರ್ ವಿತರಿಸಲು ಫಾರ್ಮ 14 ಅನ್ನು ಭರ್ತಿ ಮಾಡಬೇಕು, ಅದರಲ್ಲಿ ತರಬೇತಿ ನೀಡಿದ ಸವಿವರ ಇರಲಿದೆ. ಆದರೆ ಅಧಿಕಾರಿಗಳು 2 ತಿಂಗಳ ಹಿಂದಿನ ದಿನಾಂಕವನ್ನು ನಮೂದಿಸಿ ತರಬೇತಿ ನೀಡದೇ ಮೋಸವೆಸಗುತ್ತಿದ್ದಾರೆ. ಸೌದಿ, ದುಬೈನಲ್ಲಿರುವವರಿಗೆ ಕೂಡ ಎಲ್ ಎಲ್ ಆರ್ ವಿತರಿಸಲಾಗಿದೆ ಎನ್ನಲಾಗಿದೆ.

ಎ ಆರ್ ಟಿ ಓ ಭಗವಾನ್ ದಾಸ್ ತಿಪಟೂರಿಗೆ ವರ್ಗಾವಣೆಯಾಗಿದ್ದು, ಗುರುವಾರ ಅಧಿಕಾರದಿಂದ ಬಿಡುಗಡೆಯಾಗುವ ಸಮಯದಲ್ಲಿ 150 ಮಂದಿಗೆ ಎಲ್ ಎಲ್ ಆರ್ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನು ಪ್ರಶ್ನಿಸಿದರೆ ಡಿಸಿ ಆದೇಶಿಸಿದ್ದಾರೆ ಎಂದು ಸಬೂಬು ಹೇಳುತ್ತಿದ್ದು, ಡಿಸಿ ಆದೇಶ ಮಾಡಿದ್ದರೂ ಕೂಡ ದಾಖಲೆಗಳನ್ನು ಪರಿಶೀಲಿಸದೇ ಎಲ್ ಎಲ್ ಆರ್ ವಿತರಿಸುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಲ್ಲದೇ ಕರ್ತವ್ಯಲೋಪ ಎಸಗುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.