ಬೆಂಗಳೂರು (Bengaluru): ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಸಂಭವಿಸಿದ್ದ ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾಸೆಂಜರ್ ಆಟೋ ಚಾಲಕ ಗಿರಿಸಾಗರ್ (34) ಮೃತಪಟ್ಟವರು. ಅಪಘಾತದಲ್ಲಿ ಟೆಂಪೋ, ಆಟೋ, ಬಿಎಂಟಿಸಿ ಬಸ್ ಜಖಂಗೊಂಡಿವೆ.
ಮೈಸೂರು ಮುಖ್ಯರಸ್ತೆಯಲ್ಲಿ ಹೊಸಗುಡ್ಡದಳ್ಳಿ ಜಂಕ್ಷನ್ ಕಡೆಯಿಂದ ಚಾಲಕ ಬಾಪೂಜಿನಗರ ಕಡೆಗೆ ಹೋಗಲು ಕ್ಯಾಂಟರ್ ನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ಸ್ಯಾಟಲೈಟ್ ಬಸ್ ನಿಲ್ದಾಣದ ಹೊರ ದ್ವಾರದ ಬಳಿ ಮುಂದೆ ಹೋಗುತ್ತಿದ್ದ ಮಹೇಂದ್ರ ಗೂಡ್ಸ್ ಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಮಹೇಂದ್ರ ಗೂಡ್ಸ್ ವಾಹನವು ಮುಂದೆ ಹೋಗುತ್ತಿದ್ದ ಪ್ಯಾಸೆಂಜರ್ ಆಟೋ ಹಾಗೂ ಬಿಎಂಟಿಸಿ ವೋಲ್ವೋ ಬಸ್ ಗೆ ಡಿಕ್ಕಿಯಾಗಿ ಪ್ಯಾಸೆಂಜರ್ ಆಟೋ ಒಲ್ವೋ ಬಸ್ ಮತ್ತು ಗೂಡ್ಸ್ ವಾಹನದ ಮದ್ಯ ಸಿಲುಕಿಕೊಂಡು ನಜ್ಜುಗುಜ್ಜಾಗಿದೆ.
ಆಟೋದಲ್ಲಿ ಸಿಲುಕಿದ್ದ ಚಾಲಕ ಗಿರಿಸಾಗರ್ ಅವರನ್ನು ಸ್ಥಳೀಯರು ಅರ್ಧಗಂಟೆಗಳ ಕಾಲ ಹರಸಾಹಸ ನಡೆಸಿ ಹೊರಗೆ ಕರೆತಂದಿದ್ದರು. ಹೊರತಂದ ಅವರ ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತೀರ್ವ ಸ್ವರೂಪದ ಗಾಯವಾಗಿತ್ತು. ಚಿಕಿತ್ಸೆಗಾಗಿ ಹತ್ತಿರದ ಪಿನಾಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದರು.
ಸರಣಿ ಅಪಘಾತದಿಂದ ಮೈಸೂರು ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಜಖಂಗೊಂಡ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ಯಾಂಟರ್ ಬಿಟ್ಟು ಪರಾರಿಯಾಗಿರುವ ಚಾಲಕನ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.