ತೆಲಂಗಾಣ: ವಾರಂಗಲ್ ಜಿಲ್ಲೆಯಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿದ್ದ 19 ಕೆಜಿಗೂ ಅಧಿಕ ಚಿನ್ನವನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದ್ದು ಕಳವಾದ ಚಿನ್ನದ ಮೌಲ್ಯ ಸುಮಾರು 13.6 ಕೋಟಿ ರೂ ಎನ್ನಲಾಗಿದೆ.
ಈ ಘಟನೆ ಕಳೆದ ಸೋಮವಾರ(ನ.18) ರಂದು ಮಧ್ಯರಾತ್ರಿ ನಡೆದಿದ್ದು ಮಂಗಳವಾರ ಬೆಳಿಗ್ಗೆ ಬ್ಯಾಂಕ್ ಸಿಬಂದಿ ಬಂದಾಗಲೇ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಬ್ಯಾಂಕಿಗೆ ಭದ್ರತಾ ಸಿಬಂದಿ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಘಟನೆ ಸಂಬಂಧ ಬುಧವಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು ಕಳ್ಳರು ಬ್ಯಾಂಕಿನ ಎಲ್ಲ ವಿಚಾರಗಳನ್ನು ಅರಿತುಕೊಂಡೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕಿನ ಲಾಕರ್ ಗುರಿಯಾಗಿಸಿ ಸಂಚು ರೂಪಿಸಿದ್ದಾರೆ. ಅದಕ್ಕಾಗಿ ಗ್ಯಾಸ್ ಕಟ್ಟರ್ ಬಳಸಿಕೊಂಡು ಬ್ಯಾಂಕಿನ ಕಿಟಕಿಯ ಸರಳುಗಳನ್ನು ತುಂಡರಿಸಿ ಬ್ಯಾಂಕ್ ಒಳಗೆ ಪ್ರವೇಶ ಮಾಡಿದ್ದಾರೆ ಅಲ್ಲದೆ ಬ್ಯಾಂಕ್ ಒಳಗಿರುವ ಅಲಾರಾಂ ತಂತಿಗಳನ್ನು ತುಂಡರಿಸಿ ಸಿಸಿಟಿವಿ ನಿಷ್ಕ್ರಿಯಗೊಳಿಸಿ ಕೃತ್ಯ ಎಸಗಿದ್ದಾರೆ ಬಳಿಕ ಕೃತ್ಯದ ಯಾವುದೇ ಕುರುಹು ಸಿಗಬಾರದೆಂದು ಸಿಸಿಟಿವಿ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಬ್ಯಾಂಕ್ ಒಳಗೆ ಪ್ರವೇಶಿಸಿದ ಕಳ್ಳರು ಗ್ಯಾಸ್ ಕಟ್ಟರ್ ಮೂಲಕ ಲಾಕರ್ ಒಳಗಿದ್ದ ಸುಮಾರು 19 ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ, ಇದರ ಮೌಲ್ಯವೇ ಸುಮಾರು 13.6 ಕೋಟಿ ರೂ. ಆಗಿದೆ ಎನ್ನಲಾಗಿದೆ.
ಕಳ್ಳರ ಪತ್ತೆಗೆ ನಾಲ್ಕು ತಂಡ:
ಬ್ಯಾಂಕ್ ದರೋಡೆ ಕೃತ್ಯಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಕಳ್ಳರ ಪತ್ತೆಗೆ ನಾಲ್ಕು ತಂಡ ರಚಿಸಿದ್ದು ಆದಷ್ಟು ಬೇಗ ಕಳ್ಳರ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.