ಮೈಸೂರು : ಈ ಬಾರಿ ನಾಡಹಬ್ಬ ಸಾಂಪ್ರದಾಯಿಕ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಆರಮನೆಗೆ ಆಗಮಿಸಿರುವ ಅತ್ಯಂತ ಕಿರಿಯ ವಯಸ್ಸಿನ ಆನೆ ಎಂಬ ಖ್ಯಾತಿಗೆ ೨೧ ವರ್ಷದ ರೋಹಿತ್ ಪಾತ್ರವಾಗಿದ್ದಾನೆ.
ಈ ಆನೆ ಕಂಡರೆ ರಾಜವಂಶಸ್ಥರಿಗೆ ಅಪಾರ ಪ್ರೀತಿ, ಕಾಳಜಿ ಏಕೆ ಎಂಬ ವಿಶೇಷ ವರದಿ ಇಲ್ಲಿದೆ. ಮೈಸೂರು ಅರಸರಾದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ದಿವಂಗತ ವಿಶಾಲಾಕ್ಷಿ ದೇವಿ ಒಡೆಯರ್ ಅವರ ಪುತ್ರಿ ಶೃತಿ ಕೀರ್ತಿ ದೇವಿಗೆ ರೋಹಿತ್ ಆನೆ ಕಂಡರೆ ಬಹಳ ಇಷ್ಟ. ಏಕೆಂದರೆ, ೨೦೦೨ ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಯಡಿಯಾಲ ಅರಣ್ಯ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟ ಆರು ತಿಂಗಳ ಈ ಮರಿ ಆನೆಯನ್ನು ವಿಶಾಲಾಕ್ಷ ದೇವಿ ಒಡೆಯರ್ ಅರಣ್ಯ ಇಲಾಖೆಯಿಂದ ದತ್ತು ಪಡೆದು ತಮ್ಮ ರೆಸಾರ್ಟ್ ನಲ್ಲಿ ಪ್ರೀತಿಯಿಂದ ೧೦ ವರ್ಷಗಳ ಕಾಲ ಸಾಕಿದ್ದರು. ಆಗ ಇವರ ಮಗಳು ಶ್ರುತಿ ಕೀರ್ತಿ ದೇವಿ ಕೂಡ ರೋಹಿತ್ ಆನೆಯನ್ನು ಪ್ರೀತಿಯಿಂದ ಸಾಕಿ ಅದರ ಜೊತೆಗೆ ಸಾಕಷ್ಟು ಸಮಯ ಕಳೆದಿದ್ದರು.
ಕೊನೆಗೆ ೧೨ ವರ್ಷ ಇದ್ದಾಗ ರೋಹಿತ್ ಆನೆಯನ್ನು ಬಂಡೀಪುರ ಅರಣ್ಯ ಇಲಾಖೆಗೆ ನೀಡಿದ್ದರು. ಆದರೂ ರೋಹಿತ್ ಆನೆಯ ಬಗ್ಗೆ ಶೃತಿ ಕೀರ್ತಿ ದೇವಿಗೆ ಪ್ರೀತಿ ಕಡಿಮೆಯಾಗಿಲ್ಲ. ಆನೆ ಶಿಬಿರಕ್ಕೆ ಹೋದಾಗ ಸಂದರ್ಭದಲ್ಲಿ ಕರೆದರೆ ಸಾಕು, ಓಡೋಡಿ ಬರುವ ರೋಹಿತ್ ಆನೆ ಬಗ್ಗೆ ರಾಜವಂಶಸ್ಥರಿಗೆ ವಿಶೇಷ ಪ್ರೀತಿ. ಎರಡನೇ ಹಂತದ ಗಜಪಡೆಯ ಜೊತೆಗೆ ದಸರಾದಲ್ಲಿ ಭಾಗವಹಿಸಲು ಆಗಮಿಸಿದ ರೋಹಿತ್ ಆನೆ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸಿತ್ತು.
ಈಗಲೂ ಪ್ರತಿದಿನ ಗಜಪಡೆಯ ಶಿಬಿರಕ್ಕೆ ಆಗಮಿಸಿ ಶೃತಿ ಅವರು ಆನೆಗೆ ಪ್ರಿಯವಾದ ಕಲ್ಲಂಗಡಿಹಣ್ಣು ಹಾಗೂ ಕಬ್ಬಿನ ಜ್ಯೂಸ್ ಅನ್ನು ನೀಡುತ್ತಾರೆ. ಜೊತೆಗೆ ಆನೆಯ ಆರೋಗ್ಯದ ಬಗ್ಗೆ ಮಾವುತ ಮಹದೇವ್ ಹಾಗೂ ಅವರ ಹೆಂಡತಿಯ ಬಳಿ ಮಾಹಿತಿ ಪಡೆಯುತ್ತಾರೆ. ಜೊತೆಗೆ ಅತನೊಂದಿಗೆ ಕಾಲ ಕಳೆಯುತ್ತಾರೆ.
ರೋಹಿತ್ ಶಾಂತಿ ಸ್ವಭಾವದವನಾಗಿದ್ದು, ನಮಗೆ ತುಂಬಾ ಇಷ್ಟ. ನಾನು ಅತನೊಂದಿಗೆ ಆಡಿ ಬೆಳೆದಿದ್ದೇನೆ. ಮುಂದೊಂದು ದಿನ ಜಂಬೂಸವಾರಿ ಹೊತ್ತು ಸಾಗಲಿ ಎಂಬುದೇ ಆಸೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವುದು ಮತ್ತಷ್ಟು ಖುಷಿ ತಂದಿದೆ ಎಂದು ಆನೆ ಬಗ್ಗೆ ಶೃತಿ ಕೀರ್ತಿ ದೇವಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.