ಮನೆ ಕ್ರೀಡೆ ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!

ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!

0

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 5 ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊನೆಗೂ ಸೋಲಿನ ಸರಪಳಿ ಕಳಚಿಕೊಂಡಿದೆ.

Join Our Whatsapp Group

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸುವ ಮೂಲಕ ಮುಂಬೈ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ 45 ಎಸೆತಗಳಲ್ಲಿ ಸ್ಫೋಟಕ 65 ರನ್ ಚಚ್ಚಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠರಾಗುವ ಜೊತೆಗೆ ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಅಂಗಣದಲ್ಲಿ ಮಂಗಳವಾರ ನಡೆದಿದ್ದ ಟೂರ್ನಿಯ 16ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಡೆಲ್ಲಿ ಕ್ಯಾಪಿಟಲ್ಸ್, ನಾಯಕ ಡೇವಿಡ್ ವಾರ್ನರ್ (51) ಹಾಗೂ ಉಪ ನಾಯಕ ಅಕ್ಷರ್ ಪಟೇಲ್ (54) ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ 172 ರನ್ ಸವಾಲಿನ ಮೊತ್ತ ಗಳಿಸಿತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ (65 , 6X4, 4X6) ಅವರ ಜವಾಬ್ದಾರಿ ಆಟ ಹಾಗೂ ಯುವ ಬ್ಯಾಟರ್ ತಿಲಕ್ ವರ್ಮಾ (41, 1X4, 4X6) ಸಿಡಿಲಬ್ಬರದ ಇನಿಂಗ್ಸ್ ನಿಂದ ಅಂತಿಮ ಎಸೆತದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್ ಮ್ಯಾನ್ 65 ರನ್ ಸಿಡಿಸುವ ಮೂಲಕ 2 ವರ್ಷಗಳ ನಂತರ ಐಪಿಎಲ್ ಟೂರ್ನಿಯಲ್ಲಿ ಅರ್ಧಶತಕ ಪೂರೈಸಿದರು. ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ನ ಇತಿಹಾಸದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 977 ರನ್ ಕಲೆ ಹಾಕಿ, ವಿರಾಟ್ ಕೊಹ್ಲಿ (925) ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿರುವ 26 ಪಂದ್ಯಗಳಲ್ಲಿ 925 ರನ್ ಸಿಡಿಸಿದ್ದಾರೆ. ಹಿಟ್ಮ್ಯಾನ್ ರೋಹಿತ್ ಶರ್ಮಾ ತಮ್ಮ 33ನೇ ಪಂದ್ಯದಲ್ಲಿ ಕ್ಯಾಪಿಟಲ್ಸ್ ವಿರುದ್ಧ 900 ರನ್ ಗಳನ್ನು ಪೂರ್ಣಗೊಳಿಸಿದ್ದಾರೆ. ಶನಿವಾರ ಆರ್ ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಇನ್ನು 75 ರನ್ ಗಳಿಸಿದರೆ, ಡಿಸಿ ವಿರುದ್ಧ 1000 ರನ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್ ಶರ್ಮಾ 6 ಮನಮೋಹಕ ಅರ್ಧಶತಕಗಳೊಂದಿಗೆ 977 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ವಿರಾಟ್ ಕೊಹ್ಲಿ (925), ಅಜಿಂಕ್ಯಾ ರಹಾನೆ (792), ರಾಬಿನ್ ಉತ್ತಪ್ಪ (740), ಸುರೇಶ್ ರೈನಾ (661) ಇದ್ದಾರೆ. 2008 ರಿಂದ ಇಲ್ಲಿಯವರೆಗೂ ಒಟ್ಟು 230 ಐಪಿಎಲ್ ಪಂದ್ಯಗಳಾಡಿರುವ ರೋಹಿತ್ ಶರ್ಮಾ, ಒಂದು ಶತಕ, 41 ಅರ್ಧಶತಕಗಳೊಂದಿಗೆ 5966 ರನ್ ಬಾರಿಸಿದ್ದಾರೆ.