ಭುವನೇಶ್ವರ (Bhubaneswar)-ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ಆರ್‌ಪಿಎಫ್ ಸಿಬ್ಬಂದಿಗಳು ಸಮಯ ಪ್ರಜ್ಞೆ ಮೆರೆದು ಪ್ರಾಣ ಉಳಿಸಿದ್ದಾರೆ.
ಭುವನೇಶ್ವರ ರೈಲು ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ಸಿಲುಕದಂತೆ ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿಯ ಎಚ್ಚರಿಕೆಯಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಬ್ಬರು ಮಹಿಳಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3 ರಲ್ಲಿ ಚಲಿಸುತ್ತಿದ್ದ ಪಲಾಸ-ಕಟಕ್ ಪ್ಯಾಸೆಂಜರ್ ರೈಲಿನಿಂದ ಇಬ್ಬರು ಮಹಿಳೆಯರು ಇಳಿಯುತ್ತಿದ್ದಾಗ ಅವರಲ್ಲಿ ಒಬ್ಬರಾದ ಕೆ.ಸರಸ್ವತಿ (58) ಜಾರಿಬಿದ್ದರು. ಘಟನೆ ನಡೆದಾಗ ರೈಲು ಚಲಿಸುವ ಸ್ಥಿತಿಯಲ್ಲಿತ್ತು. ಆಕೆಯ ಜೊತೆಗಿದ್ದ ಬಿ.ಚಂದ್ರಮ್ಮ ಆಕೆಯನ್ನು ತಡೆ ಹಿಡಿಯಲು ಯತ್ನಿಸಿದರಾದರೂ ಆಕೆಯೂ ಕೆಳಗೆ ಬಿದ್ದರು. ಈ ವೇಳೆ ಇಬ್ಬರೂ ರೈಲಿನ ಕೆಳಗೆ ಸಿಲುಕುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಇಬ್ಬರನ್ನೂ, ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಹೆಡ್ ಕಾನ್‌ಸ್ಟೆಬಲ್ ಸನಾತನ ಮುಂಡಾ ಅವರು ರಕ್ಷಣೆ ಮಾಡಿದರು.
ಚಲಿಸುತ್ತಿದ್ದ ರೈಲಿನ ಕೆಳಗೆ ಜಾರಿಕೊಳ್ಳಲು ಮುಂದಾದ ಸರಸ್ವತಿಯನ್ನು ಕ್ಷಣಮಾತ್ರದಲ್ಲಿ ಹಿಡಿದು ಸುರಕ್ಷಿತವಾಗಿ ಎಳೆದರು. ಇಬ್ಬರು ಮಹಿಳೆಯರನ್ನು ಆರ್ ಪಿಎಫ್ ಸಿಬ್ಬಂದಿ ರಕ್ಷಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೆಚ್ಚುವರಿ ಡಿಜಿಪಿ (ರೈಲ್ವೆ) ಸುಧಾನ್ಸು ಸಾರಂಗಿ ಅವರು ಮಹಿಳೆಯನ್ನು ರಕ್ಷಿಸಿದ ಮುಂಡಾ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. “ಭುವನೇಶ್ವರ ರೈಲ್ವೇ ನಿಲ್ದಾಣದಲ್ಲಿ ಹೆಡ್ ಕಾನ್‌ಸ್ಟೆಬಲ್ ಎಸ್ ಮುಂಡಾ ಅವರ ಅದ್ಭುತ ಕೆಲಸ. ಅವರು ಮಹಿಳಾ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ” ಎಂದು ಸಾರಂಗಿ ಹೇಳಿದ್ದಾರೆ.