ಮೈಸೂರು(Mysuru): ಮೈಸೂರು ವಿಶ್ವ ವಿದ್ಯಾನಿಲಯದ ಬೌದ್ಧ ಅಧ್ಯಯನ ಕೇಂದ್ರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಸಂಸದ ಶ್ರೀನಿವಾಸ್ ಪ್ರಸಾದ್, ನಾನು ಮೈಸೂರು ವಿವಿಯ ಹಳೆಯ ವಿದ್ಯಾರ್ಥಿ. ನಾನು ಐದು ದಶಕಗಳಿಂದ ಸಕ್ರಿಯ ಚುನಾವಣಾ ರಾಜಕೀಯದಲ್ಲಿದ್ದೇನೆ. ಚಾಮರಾಜನಗರ ಕ್ಷೇತ್ರದಿಂದ ಆರು ಬಾರಿ ಲೋಕಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ವಿಧಾನಸಭೆಗೂ ಕೂಡಾ ಆಯ್ಕೆಯಾಗಿದ್ದೇನೆ. ವಾಜಪೇಯಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಐದು ದಶಕಗಳ ಕಾಲದ ನನ್ನ ರಾಜಕೀಯ ವೃತ್ತಿಜೀವನವು ನಿಷ್ಪಕ್ಷಪಾತವಾಗಿದೆ.
2024 ರ ಅಂತ್ಯದ ವೇಳೆಗೆ ನಾನು ಸಕ್ರಿಯ ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು ಪೂರ್ಣಗೊಳಿಸಲಿದ್ದೇನೆ. ಬೌದ್ಧ ಅಧ್ಯಯನ ಕೇಂದ್ರ ಆರಂಭಿಸಲು ಭೂಮಿ ಹಾಗೂ ಆರ್ಥಿಕ ನೆರವು ನೀಡಲು ಮೈಸೂರು ವಿವಿ ಮುಂದೆ ಬಂದಿದೆ. ನನ್ನ ಬಹುದಿನದ ಮಹತ್ವಾಕಾಂಕ್ಷೆಯ ಸಾಕಾರಗೊಳ್ಳುವ ಕ್ಷಣವಾಗಿದೆ. ಈ ನಿಟ್ಟಿನಲ್ಲಿ ಮೈಸೂರು ವಿವಿ ಉಪಕುಲಪತಿಗಳ ಪ್ರಸ್ತಾವನೆ ಪರಿಗಣಿಸಿ ಕೇಂದ್ರ 10 ಕೋಟಿ ಆರ್ಥಿಕ ಸಹಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.