ಮನೆ ರಾಜ್ಯ ಆರ್‌ಎಸ್‌ಎಸ್‌ ಪಥಸಂಚಲನ ವಿವಾದ – ಬೆಂಗಳೂರಲ್ಲಿಂದು ಶಾಂತಿ ಸಭೆ, ಇತರ ಸಂಘಟನೆಗಳಿಗಿಲ್ಲ ಆಹ್ವಾನ..!

ಆರ್‌ಎಸ್‌ಎಸ್‌ ಪಥಸಂಚಲನ ವಿವಾದ – ಬೆಂಗಳೂರಲ್ಲಿಂದು ಶಾಂತಿ ಸಭೆ, ಇತರ ಸಂಘಟನೆಗಳಿಗಿಲ್ಲ ಆಹ್ವಾನ..!

0

ಕಲಬುರಗಿ : ಚಿತ್ತಾಪುರದಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ನ ಪಥಸಂಚಲನ ಮತ್ತು ಭೀಮ್ ಆರ್ಮಿ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಹೈಕೋರ್ಟ್‌ ಸೂಚನೆಯಂತೆ ನವೆಂಬರ್ 5 ರಂದು (ಇಂದು) ಬೆಂಗಳೂರಿನಲ್ಲಿ 2ನೇ ಹಂತದ ಶಾಂತಿ ಸಭೆ ನಡೆಯಲಿದೆ.

ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವ ಪಡೆದಿದೆ. ಹೈಕೋರ್ಟ್ ಆದೇಶದಂತೆ, ರಾಜ್ಯದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರ ನೇತೃತ್ವದಲ್ಲಿ ಈ ಶಾಂತಿ ಸಭೆ ನಡೆಯಲಿದೆ. ಆರ್‌ಎಸ್‌ಎಸ್ ಪರವಾಗಿ ಅರ್ಜಿದಾರರಾದ ಅಶೋಕ ಪಾಟೀಲ್ ಸೇರಿ ಐದು ಜನರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಗಿದೆ.

ಅರ್ಜಿದಾರ ಅಶೋಕ ಪಾಟೀಲ್, ಕೃಷ್ಣಾ ಜೋಶಿ, ಪ್ರಹ್ಲಾದ್ ವಿಶ್ವಕರ್ಮ ಹಾಗೂ ಆರ್‌ಎಸ್‌ಎಸ್‌ ಪರ ವಕೀಲ ಅರುಣ್ ಶ್ಯಾಮ್ ಮತ್ತು ವಾದಿರಾಜ್ ಕಾಡ್ಲೂರು ಅವರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿವೆ.

ಈ ಸಭೆಯಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂಬ ಕಾರಣದಿಂದ ಹಾಗೂ ಉಳಿದ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ, ಭೀಮ್ ಆರ್ಮಿ ಸೇರಿದಂತೆ ಇತರ 9 ಸಂಘಟನೆಗಳಿಗೂ ಆಹ್ವಾನ ನೀಡಲಾಗಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಆರ್‌ಎಸ್‌ಎಸ್‌ ಮುಖಂಡರಿಗೆ ಮಾತ್ರ ಹಾಜರಾಗುವಂತೆ ತಿಳಿಸಲಾಗಿದೆ. ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡರ ಮತ್ತು ವಕೀಲರ ಲಿಖಿತ ಹೇಳಿಕೆಗಳನ್ನ ಎಜಿ ಮತ್ತು ಜಿಲ್ಲಾಡಳಿತ ಪಡೆದುಕೊಳ್ಳಲಿದೆ.

ಶಾಂತಿ ಸಭೆಯ ನಂತರ, ನವೆಂಬರ್ 7 ರಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವ ಕುರಿತು ಅರ್ಜಿಯ ಅಂತಿಮ ವಿಚಾರಣೆ ನಡೆಯಲಿದೆ. ಈ ಸಭೆಯ ವರದಿಯನ್ನ ಕೋರ್ಟ್‌ಗೆ ಸಲ್ಲಿಸಿದ ನಂತರ ಅನುಮತಿ ಸಿಗುತ್ತದೆಯೇ ಎಂಬುದು ಈಗ ರಾಜ್ಯದಲ್ಲಿ ಕುತೂಹಲ ಕೆರಳಿಸಿದೆ.