ಕಲಬುರಗಿ : ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ನಿಗದಿಯಾಗಿದ್ದ ಆರ್‌ಎಸ್‌ಎಸ್ ಪಥ ಸಂಚಲನಕ್ಕಾಗಿ ಹಾಕಿದ್ದ ಬ್ಯಾನರ್ ಮತ್ತು ಬಂಟಿಂಗ್‌ಗಳನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳ ನಡೆಗೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರ ಪುರಸಭೆ ಕಚೇರಿ ಮುಂದೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ಆರ್‌ಎಸ್‌ಎಸ್ ಪಥ ಸಂಚಲನ ಹಿನ್ನೆಲೆಯಲ್ಲಿ 6 ಸಾವಿರ ರೂ. ಹಣ ಪಾವತಿಸಿ ಬಂಟಿಂಗ್, ಬ್ಯಾನರ್ ಅಳವಡಿಸಲಾಗಿತ್ತು. ಹಣ ಪಾವತಿಸಿದರೂ ತೆರವು ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಿಚಾರಣೆಗೆ ತೆರಳಿದಾಗ ಪುರಸಭೆ ಸಿಬ್ಬಂದಿ ಕಚೇರಿ ಬಿಟ್ಟು ಹೋಗಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್ಎಸ್ ಕಾರ್ಯಕ್ರಮಕ್ಕೆ ಬ್ಯಾನ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಪಿಡಿಒ ಅಮಾನತು ಕೂಡ ಮಾಡಲಾಗಿದೆ. ಸರ್ಕಾರದ ನಡೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಹಿಂದೂ ಕಾರ್ಯಕರ್ತರು ಕೂಡ ಆಕ್ರೋಶ ಹೊರಹಾಕಿದ್ದು, ನಾಳೆ ಪಥ ಸಂಚಲನಕ್ಕೆ ಮುಂದಾಗಿದ್ದಾರೆ.














