ಮನೆ ಸುದ್ದಿ ಜಾಲ ಆರ್‌ಟಿಐ ಆಯುಕ್ತರ ಹುದ್ದೆಗೂ ಕಮಿಷನ್! ಹಣ ನೀಡಿದವರಿಗೆ ಹುದ್ದೆ ನೀಡಲು ಸಿದ್ಧತೆ

ಆರ್‌ಟಿಐ ಆಯುಕ್ತರ ಹುದ್ದೆಗೂ ಕಮಿಷನ್! ಹಣ ನೀಡಿದವರಿಗೆ ಹುದ್ದೆ ನೀಡಲು ಸಿದ್ಧತೆ

0

ಬೆಂಗಳೂರು (Bengaluru)- ಆರ್‌ಟಿಐ ಆಯುಕ್ತರ (RTI Commissioner)ಹುದ್ದೆಯ ನೇಮಕಕ್ಕೆ ಕೋಟ್ಯಂತರ ರೂ. ‘ವ್ಯವಹಾರ’ ನಡೆಯುತ್ತಿರುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಬಹಿರಂಗ ಹೇಳಿಕೆಗಳು ಕೇಳಿ ಬರುತ್ತಿವೆ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಕ್ಕೆಂದು ಜಾರಿಗೆ ತಂದಿರುವ ಆರ್ ಟಿಐ ನಲ್ಲೂ ಇದೀಗ ಲಂಚದ ಆರೋಪ ಕೇಳಿ ಬಂದಿದೆ.
ರಾಜ್ಯದ ನಾಲ್ಕು ವಿಭಾಗದ ಆರ್‌ಟಿಐ ಆಯುಕ್ತರ ಹುದ್ದೆಗಳು ಸದ್ಯಕ್ಕೆ ಖಾಲಿಯಿವೆ. ಆ ಹುದ್ದೆಗಳಿಗೆ ನೇಮಕ ಮಾಡುವ ಸಂಬಂಧ ಸಮಿತಿ ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಮಿತಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇದ್ದಾರೆ. ಈ ಸಮಿತಿಯ ಮುಂದಿಡುವ ಆಯ್ಕೆ ಪಟ್ಟಿಯನ್ನು ತಯಾರು ಮಾಡುವಲ್ಲಿಯೇ ಕೋಟ್ಯಂತರ ಲಂಚಾವತಾರ ನಡೆಯುತ್ತಿದೆ ಎಂದು ಕೆಲ ಅಭ್ಯರ್ಥಿಗಳು ದೂರಿದ್ದಾರೆ.
ಆರ್ ಟಿಐ ನೀತಿಯ ಅನ್ವಯ ಆರ್‌ಟಿಐ ಆಯುಕ್ತರ ನೇಮಕವಾಗಬೇಕಿದೆ. ಆದರೆ, ಈ ನೇಮಕದಲ್ಲೂ ಕೂಡ ಲಂಚಾವತಾರ ಕೇಳಿಬಂದಿದ್ದು, ಆರ್‌ಟಿಐ ಮಾಹಿತಿ ಅದೆಷ್ಟು ಪಾರದರ್ಶಕವಾಗಿರಲಿದೆ ಎಂಬ ಅನುಮಾನ ಹುಟ್ಟುಹಾಕಿದೆ. ಜತೆಗೆ, ಅಧಿಕಾರಿಗಳ ವರ್ತನೆಗೆ ಆರ್‌ಟಿಐ ಕಾರ್ಯಕರ್ತರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಳಗಾವಿ ಹೊರತುಪಡಿಸಿ ಬೆಂಗಳೂರು-1 ಮತ್ತು ಬೆಂಗಳೂರು-2 ಹಾಗೂ ಕಲಬುರ ಪೀಠದ ಆರ್‌ಟಿಐ ಆಯುಕ್ತರ ಹುದ್ದೆಗಳು ಖಾಲಿ ಯದ್ದವು, ಇವುಗಳ ಭರ್ತಿಗಾಗಿ ಸರಕಾರ ಜುಲೈ 2021 ರಲ್ಲಿಯೇ ಅಧಿಸೂಚನೆ ಹೊರಡಿಸಿದ್ದು, 2022 ರ ಜನವರಿ 19 ರಂದು ಆಯ್ಕೆ ಸಮಿತಿ ರಚನೆ ಮಾಡಿದೆ. ಸಮಿತಿಯ ಸದಸ್ಯರಲ್ಲೊಬ್ಬರಾದ ಪ್ರತಿ ಪಕ್ಷನಾಯಕ ಸಿದ್ದರಾಮಯ್ಯ ಅವರು ಅರ್ಹರಾದ ಯು.ಕೆ.ಪಾಟೀಲ್ ಅವರಿಗೆ ನೀಡಬೇಕೆಂದು ಶಿಫಾರಸು ಮಾಡಿದ್ದರೂ, ಇನ್ನುಳಿದ ಅಭ್ಯರ್ಥಿಗಳು ಹಣದ ಮೂಲಕ ಹುದ್ದೆ ಪಡೆದುಕೊಳ್ಳುವ ಕಸರತ್ತು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಲೇವಾರಿಯಾಗದ 50 ಸಾವಿರ ಅರ್ಜಿ:
ಆರ್ ಟಿಐ ಕಾಯಿದೆ ಭ್ರಷ್ಟಾಚಾರ ಕಡಿವಾಣಕ್ಕೆ ತರಲು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಕಾನೂನು. ಆಡಳಿತ ಪಾರದರ್ಶಕ ಆಗಿರಬೇಕೆಂಬ ಕಾರಣಕ್ಕೆ ಮತ್ತು ಅದರ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಸಿಗಬೇಕೆಂಬ ಕಾರಣಕ್ಕೆ ಆರ್‌ ಟಿಐ ಕಾನೂನು ಜಾರಿಗೆ ತರಲಾಗಿದೆ. ಆದರೆ, ರಾಜ್ಯದಲ್ಲಿರುವ ನಾಲ್ಕು ವಿಭಾಗೀಯ ಪೀಠಗಳ ಆಯುಕ್ತರ ಹುದ್ದೆ ಖಾಲಿಯಿವೆ. ಇದರಿಂದಾಗಿ ರಾಜ್ಯದ ನಾಲ್ಕು ವಿಭಾ ಗಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಆರ್‌ ಟಿಐ ಅರ್ಜಿಗಳು ಇತ್ಯರ್ಥವಾಗದೆ ಉಳಿದಿವೆ ಎಂಬ ಮಾಹಿತಿಯಿದೆ.
ಹಿಂದಿನ ನೇಮಕದಲ್ಲೂ ಅವ್ಯವಹಾರ:
ಬೆಳಗಾವಿ ಆರ್‌ಟಿಐ ಆಯುಕ್ತರ ನೇಮಕದಲ್ಲಿ ಸಹ ಹಿಂದೆ ಇದೇ ರೀತಿಯ ಅವ್ಯವಹಾರ ನಡೆದಿತ್ತು ಎಂಬ ಆರೋಪವಿದೆ. ಈ ಸಂಬಂಧ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಪ್ರಕರಣವಿದ್ದು, ನೇಮಕವನ್ನು ಪ್ರಶ್ನೆ ಮಾಡಲಾಗಿದೆ. ಇದೀಗ ಅಂತಿಮ ತೀರ್ಪು ಅವರ ವಿರುದ್ಧ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಉಳಿದ ಪೀಠಗಳ ಆಯ್ಕೆಯಲ್ಲಿಯೂ ಅಂತಹದ್ದೆ ಆಕ್ರಮದ ವಾಸಣೆ ಹೊರಬಂದಿದೆ.
ಅರ್ಹರಿಗೆ ಅನ್ಯಾಯ:
18 ಪದವಿ ಪಡೆದಿರುವ, ನ್ಯಾಷನಲ್ ಲಾ ಕಾಲೇಜಿನ ಪ್ರೊಫೆಸರ್ ಹುದ್ದೆಯಂತ ಸ್ಥಾನಮಾನ ಅಲಂಕರಿಸಿರುವ, ನ್ಯಾಷನಲ್ ಲಾ ಜರ್ನಲ್‌ನ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಎಸ್.ಯು.ಕೆ. ಪಾಟೀಲ್ ಅವರನ್ನು ತಿರಸ್ಕರಿಸಿ, ಅವರಿಗಿತ ಏಳು ವರ್ಷ ಅನುಭವದಲ್ಲಿ ಕಡಿಮೆಯಿರುವವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಬೆಂಗಳೂರು 1 ಮತ್ತು 2 ಹಾಗೂ ಕಲಬುರಗಿ ಪೀಠಗಳಿಗೆ ಒಟ್ಟು 222 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕೆಲ ಪ್ರಭಾವಿಗಳು ಹಣದ ಮೂಲಕ ಹುದ್ದೆ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪವಿದೆ. ಸರಕಾರ ಇದಕ್ಕೆ ಅವಕಾಶ ನೀಡಬಾರದು. ಅರ್ಹನಿಗಷ್ಟೇ ಈ ಹುದ್ದೆಯನ್ನು ನೀಡಬೇಕು. ಆ ಮೂಲಕ ಸರಕಾರ ಆರ್‌ಟಿಐ ಆಯುಕ್ತರ ಹುದ್ದೆಯನ್ನು ಭ್ರಷ್ಟರ ಕೈಗೆ ಕೊಡಬಾರದು ಎಂದು ಹಿರಿಯ ನ್ಯಾಯವಾದಿ ಎಸ್.ಯು.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಅಪಾರ ಅನುಭವದ ನಡುವೆಯೂ ನನ್ನ ಆಯ್ಕೆಯನ್ನು ತಿರಸ್ಕರಿಸಿದ್ದರು. ಈ ಸಂಬಂಧ ನಾನು ಕಾನೂನು ಹೋರಾಟ ಮಾಡುತ್ತಿದ್ದೇನೆ. ಈಗ ಉಳಿದ ಹುದ್ದೆಗಳ ನೇಮಕದಲ್ಲೂ ಅಪಾರ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ. ಆದರೆ, ಸರಕಾರ ಇದಕ್ಕೆಲ್ಲ ಅವಕಾಶ ನೀಡದೆ, ಅರ್ಹರಿಗೆ ಆಯುಕ್ತರ ಹುದ್ದೆಗಳನ್ನು ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.