ಚಿಕ್ಕಬಳ್ಳಾಪುರ: ಜಮೀನಿಗೆ ನೀರು ಬಿಡುವ ವಿಷಯಕ್ಕೆ ಸಂಬಂಧಿಸಿದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಚಿಗಟಗೆರೆ ಗ್ರಾಮದ ವಡ್ಡರ ಬಂಡೆಯಲ್ಲಿ ನಡೆದಿದೆ. ಈ ಹಿಂಸಾಚಕ ಘಟನೆಯಲ್ಲಿ ಗಂಗರಾಜ್ (35) ಎಂಬ ವ್ಯಕ್ತಿ ಸಾವಿಗೀಡಾಗಿದ್ದು, ಮೃತನ ಚಿಕ್ಕಪ್ಪ ಗಂಗಾಧರಪ್ಪ ಹಾಗೂ ಅವರ ಪುತ್ರ ಸೋಮೇಶ್ ಈ ಹತ್ಯೆಯನ್ನು ನಡೆಸಿದ್ದಾರೆ.
ಗುರುವಾರ ಜಮೀನಿಗೆ ನೀರು ಬಿಡುವ ವಿಚಾರವಾಗಿ ಗಂಗರಾಜ್ ಹಾಗೂ ಅವರ ಸಂಬಂಧಿಕರ ನಡುವೆ ತೀವ್ರ ವಾದವಿವಾದ ಉಂಟಾಗಿದೆ. ವಾಗ್ವಾದವು ತೀವ್ರಗೊಂಡು ದೌರ್ಜನ್ಯಕ್ಕೆ ತಿರುಗಿದ್ದು, ಗಂಗಾಧರಪ್ಪ ಹಾಗೂ ಸೋಮೇಶ್ ಮಚ್ಚಿನಿಂದ ಗಂಗರಾಜ್ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮ ಗಂಗರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೊಂದೆಡೆ ಗಂಗರಾಜ್ ಸಹೋದರ ನಂದೀಶ್ ಕೂಡ ಹಲ್ಲೆಗೆ ಒಳಗಾಗಿದ್ದು, ತೀವ್ರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ನಂತರ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ಮತ್ತು ಲಲಿತಮ್ಮ ತನಿಖೆ ಆರಂಭಿಸಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಗಂಗಾಧರಪ್ಪ ಹಾಗೂ ಸೋಮೇಶ್ ಎಂಬವರನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಲಾದ ಮಚ್ಚಿ ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.















