ಬೆಂಗಳೂರು : ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ವದಂತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೆರೆ ಎಳೆದಿದ್ದಾರೆ. ಯಾವುದೇ ಕ್ಯಾನ್ಸರ್ ಕಾರಕ ಅಂಶವಿಲ್ಲ. ಯಾರು ಆತಂಕಪಡಬೇಕಿಲ್ಲ, ತಿನ್ನಲು ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಮೊಟ್ಟೆಯ ಬಗ್ಗೆ ಕೆಲವೊಂದು ಮಾಹಿತಿಗಳು ಕೇಳಿಬರುತ್ತಿವೆ. ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು. ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡಿದೆ.
ಮೊಟ್ಟೆ ಸೇವನೆ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕಳೆದ ವರ್ಷ 147 ಮೊಟ್ಟೆ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಪರೀಕ್ಷಿಸಿದ ಮಾದರಿಗಳಲ್ಲಿ ಕೇವಲ ಒಂದು ಫೇಲ್ ಆಗಿದ್ದು, ಉಳಿದವು ಉತ್ತಮವಾಗಿದ್ದವು. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು, ಸೇವಿಸಬಹುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಮೊಟ್ಟೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮೊಟ್ಟೆಯನ್ನು ಶಾಲಾ ಮಕ್ಕಳಿಗೆ ಕೊಡಬಹುದು, ತಿನ್ನಬಹುದು, ಆರೋಗ್ಯಕರವಾಗಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ `ಜೀನೋಟಾಕ್ಸಿಕ್’ ಕೂಡಿದೆ ಎಂಬ ವಿಡಿಯೋ ಹರಿದಾಡುತ್ತಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಗಳಲ್ಲಿ ನಿಷೇಧಿತ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವದಂತಿಗಳು ಹಬ್ಬಿರುವ ಪರಿಣಾಮ ಶಾಲಾ ಮಕ್ಕಳಿಗೆ ಕೊಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿತ್ತು.















