ಬೆಂಗಳೂರು: ಪ್ರಕೃತಿ ಮತ್ತು ಪರಿಸರ ಎರಡೂ ಈ ಭೂಮಿಯ ಎರಡು ಕಣ್ಣುಗಳಿದ್ದಂತೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮತ್ತು ಪ್ರಕೃತಿಯನ್ನು ಸಂರಕ್ಷಿಸುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿಂದು ಪರಿಸರ ವಸ್ತುಪ್ರದರ್ಶನ ಉದ್ಘಾಟಿಸಿ ಮತ್ತು ಪರಿಸರ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪ್ರಕೃತಿ ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಇಂದು ಇಡೀ ಜಗತ್ತು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಎದುರಿಸುತ್ತಿದೆ. ವೃಕ್ಷ ಸಂರಕ್ಷಣೆಯೇ ಮತ್ತು ವೃಕ್ಷ ಸಂವರ್ಧನೆಯೇ ಇದಕ್ಕೆ ಪರಿಹಾರ ಎಂದು ಹೇಳಿದರು.
ನಮ್ಮ ಪೂರ್ವಜರು ಈ ಜಗತ್ತಿನಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಅತ್ಯಂತ ಹಿತಮಿತವಾಗಿ ಬಳಸುತ್ತಿದ್ದರು. ಮುಂದಿನ ಪೀಳಿಗೆಗೆ ಉಳಿಸುತ್ತಿದ್ದರು. ಬೆಟ್ಟ, ಗುಡ್ಡ, ನದಿ, ವೃಕ್ಷಗಳನ್ನು ಪೂಜಿಸುತ್ತಿದ್ದರು. ಬೆಟ್ಟದ ಮೇಲೆ ದೇವಾಲಯ ನಿರ್ಮಿಸಿ, ಆ ಗುಡ್ಡವನ್ನು ಯಾರೂ ಕಡಿದು ನಾಶ ಮಾಡದಂತೆ ತಡೆದಿದ್ದರು ಎಂದು ಹೇಳಿದರು.
ಇಂದು ಬೃಹತ್ ಯಂತ್ರಗಳ ಆವಿಷ್ಕಾರದಿಂದಾಗಿ ಭೂಗರ್ಭವನ್ನೇ ನಾವು ಬಗೆಯುತ್ತಿದ್ದೇವೆ. ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿದ್ದೇವೆ. ಮಾಲಿನ್ಯದಿಂದ ತಿನ್ನುವ ಆಹಾರ, ಕುಡಿಯುವ ನೀರು ಅಷ್ಟೇಕೆ ಪ್ರಾಣವಾಯು ಕೂಡ ಇಂದು ಕಲುಷಿತವಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲೇಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳಲ್ಲಿ ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಮೂಡಿಸಬೇಕು. ತಂದೆ ತಾಯಿ ಮನೆಯಲ್ಲಿ ಮಕ್ಕಳಿಗೆ ಸ್ವಚ್ಛತೆಯ ಪಾಠ ಹೇಳಬೇಕು. ಶಾಲೆ – ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರು ಅವರಿಗೆ ಪರಿಸರದ ಮತ್ತು ವೃಕ್ಷ ಸಂರಕ್ಷಣೆಯ ಮಹತ್ವ ತಿಳಿಸಬೇಕು. ಈ ನಿಟ್ಟಿನಲ್ಲಿ ಪರಿಸರ ಶಿಕ್ಷಣ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.
ಪರಿಸರ ಸ್ನೇಹಿ ಗಣಪನ ಪೂಜಿಸಲು ಮನವಿ:
ನೀರಲ್ಲಿ ಕರಗದ ಮತ್ತು ಭಾರ ಲೋಹಯುಕ್ತ ರಾಸಾಯನಿಕ ಬಣ್ಣದಿಂದ ಕೂಡಿದ ಪಿಓಪಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜೀವ ವೈವಿಧ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ವಿವರಿಸಿದ ಸಚಿವರು, ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪೂಜಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರಕ್ಕೆ ಉದ್ಯಾನ ನಗರಿ ಎಂಬ ಹೆಸರಿದೆ ಇದನ್ನು ದೆಹಲಿಯಂತೆ ಮತ್ತೊಂದು ಗ್ಯಾಸ್ ಛೇಂಬರ್ ಆಗಲು ಬಿಡಬಾರದು. ಇಂದಿನ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿ, ಹಸಿರು ಹೊದಿಕೆ ಹೆಚ್ಚಿಸಿ ನಗರವನ್ನು ಕಾಪಾಡಬೇಕು ಎಂದರು.
ಪರಿಸರ ಸಂರಕ್ಷಣೆಗಾಗಿ ಇಲಾಖೆಯೊಂದಿಗೆ ಕೈಜೋಡಿಸಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಅಭಿನಂದಿಸಿದ ಸಚಿವರು, ವಿದ್ಯಾರ್ಥಿಗಳಲ್ಲಿ ದಕ್ಷತೆ, ದೇಶಪ್ರೇಮ, ಶಿಸ್ತು ತರುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ಕಾರ್ಯ ಮಾಡುತ್ತಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ನಡೆಸುವ ಜಾಂಬೂರಿಗಳಲ್ಲಿ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬಂದು ಭಾಗವಹಿಸುವ ಕಾರಣ ಸಾಂಸ್ಕೃತಿಕ ವಿನಿಮಯ ಆಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಹಿರಿಯ ಪತ್ರಕರ್ತ ಹಾಗೂ ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಚಲನಚಿತ್ರ ನಟ, ನಿರ್ದೇಶಕರುಗಳಾದ ರಿಚರ್ಡ್ ಲೂಯಿಸ್ ಅವರೇ ಮತ್ತು ಕೃಷ್ಣಮೂರ್ತಿ ಚಾಮರಾಜನಗರ ರಾಮನ್ ಮತ್ತಿತರರು ಪಾಲ್ಗೊಂಡಿದ್ದರು.















