ಸಾಂಪ್ರದಾಯಿಕ ಆತ್ಮರಕ್ಷಣಾ ಕಲೆ ಉಳಿಸಬೇಕು: ಈಶ್ವರ ಖಂಡ್ರೆ
ಸುತ್ತೂರು: ಕುಸ್ತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಈ ಸಾಂಪ್ರಾದಾಯಿಕ ಆತ್ಮರಕ್ಷಣಾ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಕುಸ್ತಿ ಪಟುಗಳ ಬೆನ್ನುತಟ್ಟಿ ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಅವರು ಕುಸ್ತಿಗೆ ಭಾರತದಲ್ಲಿ ಭವ್ಯ ಇತಿಹಾಸವಿದ್ದು, ನಮ್ಮ ದೇಶೀ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ನಂದಿಕಂಬ ಇತ್ಯಾದಿ ಇಂದು ಮರೆಯಾಗುತ್ತಿದೆ. ಇದನ್ನು ಮತ್ತೆ ಜನಪ್ರಿಯಗೊಳಿಸಬೇಕಿದೆ ಎಂದರು.
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಕುಸ್ತಿ, ಗರಡಿ ಮನೆಯಲ್ಲಿನ ಕಸರತ್ತು ನಮ್ಮ ಆರೋಗ್ಯವನ್ನು ಸದೃಢವಾಗಿಡುತ್ತದೆ. ಹಿಂದೆ ಪ್ರತಿ ಗ್ರಾಮದಲ್ಲಿ ವ್ಯಾಯಾಮ ಶಾಲೆ ಇರುತ್ತಿತ್ತು, ಯುವಕರು ಕಸರತ್ತು ಮಾಡುತ್ತಿದ್ದರು. ಇಂದಿನ ಮಕ್ಕಳು ಮೊಬೈಲ್ ನಲ್ಲಿ ಕಳೆದು ಹೋಗುತ್ತಿದ್ದಾರೆ. ಪ್ರತಿಯೊಂದು ಮಗುವಿಗೂ ದೈಹಿಕ ಆರೋಗ್ಯದ ಮಹತ್ವ ತಿಳಿಸಬೇಕು ಎಂದರು.
ಎಲ್ಲರೂ ನಿಯಮಿತವಾಗಿ ಯೋಗ, ವ್ಯಾಯಾಮ, ವಾಯು ವಿಹಾರ ಇತ್ಯಾದಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಡಾ. ಯತೀಂದ್ರ ಮತ್ತಿತರರು ಭಾಗಿಯಾಗಿದ್ದರು.