ಮನೆ ರಾಜ್ಯ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ:  ಗೃಹ ಸಚಿವ ಡಾ.ಪರಮೇಶ್ವರ್

ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗೆ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ:  ಗೃಹ ಸಚಿವ ಡಾ.ಪರಮೇಶ್ವರ್

0

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ  ಜಾರಿ ಮಾಡಿದ್ದೇವೆ. ನಗರದ ನಿಗದಿತ ಪ್ರದೇಶದಲ್ಲಿ ಅಲಾರಾಂ ಇರಲಿದೆ. ಬಟನ್ ಒತ್ತಿದರೆ ತಕ್ಷಣ ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್​ ಹೇಳಿದ್ದಾರೆ.

ವಿಧಾನಪರಿಷತ್​ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, ಅಪರಾಧಿಗಳನ್ನು ಹಿಡಿಯಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕೂಡ ಬಳಕೆ ಮಾಡುತ್ತಿದ್ದೇವೆ. ಪೊಲೀಸರ ಪ್ರತಿಕ್ರಿಯೆ ಸಮಯ ಕೂಡ ವೇಗವಾಗಿ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಸೇಫ್ಟಿ ಐಲ್ಯಾಂಡ್ ವ್ಯವಸ್ಥೆಯನ್ನು ಬೆಂಗಳೂರಿನ 30 ಕಡೆಗಳಲ್ಲಿ ಸ್ಥಾಪಿಸಲಾಗಿದೆ. ನೀಲಿ ಬಣ್ಣದಲ್ಲಿರುವ ಟೆಲಿಫೋನ್ ಬೂತ್‌ನಂತಹ ರಚನೆ ಹೊಂದಿರುವ ಸೇಫ್ಟಿ ಐಲ್ಯಾಂಡ್​​ ಯಾರಾದರೂ ಸಂಕಷ್ಟದಲ್ಲಿರುವಾಗ ಅಥವಾ ಅವರ ಮೊಬೈಲ್ ಫೋನ್‌ ಸಂಪರ್ಕ ಸಾಧ್ಯವಾಗದಿದ್ದಾಗ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆಯನ್ನು ಬಳಸಬಹುದಾಗಿದೆ.

ಪ್ರತಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಸಿಸಿಟಿವಿ ಹೊಂದಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ನೀಡುತ್ತದೆ.

ಬಳಕೆದಾರರು ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಬಂದು SOS ಬಟನ್ ಒತ್ತಬೇಕು. ಇದು ಸಮೀಪದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ತಿಳಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ಆಗಮಿಸುತ್ತಾರೆ. ತೊಂದರೆಯಲ್ಲಿರುವ ವ್ಯಕ್ತಿಯು ಮೊಬೈಲ್ ಫೋನ್ ಬಳಸುವ ಸ್ಥಿತಿಯಲ್ಲಿಲ್ಲದಿದ್ದರೂ ಸಹ ಪೊಲೀಸರನ್ನು ತಲುಪುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ ನಗರ ಪೊಲೀಸರು ಈಗಾಗಲೇ ತುರ್ತು ಟೋಲ್ ಫ್ರೀ ಸಂಖ್ಯೆ 112 ಅನ್ನು ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಐಟಿ ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸಾರ್ವಜನಿಕರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಹೆಚ್ಚುವರಿ ರಸ್ತೆ ಸಾಧನಗಳಾಗಿವೆ ಎಂದು ಹೇಳಲಾಗುತ್ತದೆ.