ಮೈಸೂರು: ನವೆಂಬರ್ 18 ರಂದು ರಂದು ಮದ್ಯಾಹ್ನ 12.30 ಗಂಟೆಗೆ ಕರ್ನಾಟಕದ ಕಲಾಮಂದಿರದಲ್ಲಿ ಇಡೀ ಪ್ರಪಂಚಕ್ಕೆ ಮಾದರಿಯಾಗಿರುವ “ಸಂತ ಕವಿ ಶ್ರೀ ಕನಕದಾಸ ಜಯಂತಿ” ಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ ಶಿವರಾಜು ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ “ಸಂತ ಕವಿ ಶ್ರೀ ಕನಕದಾಸ” ಜಯಂತಿಯ ಆಚರಣೆಯ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಜಗತ್ತಿಗೆ ಅವರ ಆದರ್ಶಗಳಿಂದ ಮಾದರಿಯಾಗಿರುವ ಮಹಾನ್ ಚೇತನರಾದ ಕನಕದಾಸರ ಜಯಂತಿಯನ್ನು ರಾಜ್ಯದ ಇತರ ಜಿಲ್ಲೆಗಳಿಗಿಂತ ವಿಜೃಂಭಣೆಯಾಗಿ ಆಚರಿಸುವುದು ನಮ್ಮ ಕರ್ತವ್ಯ ಹಾಗೂ ಪುಣ್ಯದ ಕೆಲಸವಾಗಿದೆ ಎಂದರು.
ಸರ್ಕಾರದ ಶಿಷ್ಟಾಚಾರದಂತೆ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಸಂಬoಧ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಲು ಅಗತ್ಯ ಕ್ರಮ ವಹಿಸಿ, ಜಯಂತಿ ನಡೆಯುವ ಸ್ಥಳದ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ವ್ಯವಸ್ಥೆ ಮಾಡಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಿದರು.
ಸಂತ ಕವಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಂ. ಕೆ. ಸೋಮಶೇಖರ್ ಅವರು ಮಾತನಾಡಿ, ಹಲವಾರು ವರ್ಷಗಳಿಂದ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದೆ. ಅದರಲ್ಲಿಯೂ ಕಳೆದ 10 ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಮ್ಮ ಮೈಸೂರು ಜಿಲ್ಲೆಯಲ್ಲಿ ಆಚರಿಸಲಾಗುತ್ತಿದ್ದು, ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳಿಂದ ಪ್ರದರ್ಶನ ಹಾಗೂ ಟ್ಯಾಬ್ಲೋ ಗಳ ಮೆರವಣಿಗೆ ಮಾಡುವ ಮೂಲಕ ಜಯಂತಿಯ ಮೆರಗನ್ನು ಹೆಚ್ಚಿಸಲಾಗಿದೆ ಎಂದರು.
ಸಂತ ಕವಿ ಶ್ರೀ ಕನಕದಾಸ ಜಯಂತಿಯು ನವೆಂಬರ್ 18 ಮತ್ತು 19 ರಂದು ಕಲಾಮಂದಿರದಲ್ಲಿ ನಡೆಯಲಿದ್ದು, ನವೆಂಬರ್ 18 ರಂದು ಬೆಳಗ್ಗೆ 9:30 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಮೆರವಣಿಗೆಯಲ್ಲಿ 5 ಟ್ಯಾಬ್ಲೋ ಗಳ ಪ್ರದರ್ಶನ ಸೇರಿದಂತೆ 20 ಕಲಾ ತಂಡಗಳಿಂದ ವಿವಿಧ ಕಲೆಗಳ ಪ್ರದರ್ಶನ ನಡೆಯಲಿದೆ. ನವೆಂಬರ್ 19 ರಂದು ಸಂಜೆ ಕಲಾಮಂದಿರದಲ್ಲಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿಗೆ ಸನ್ಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಕಲಾತಂಡಗಳಿಂದ ಗೀತ ಗಾಯನವನ್ನು ಏರ್ಪಡಿಸಲಾಗುವುದು. ಆಹ್ವಾನ ಪತ್ರಿಕೆಯ ಮುದ್ರಣ ಮಾಡಿ ಸರ್ಕಾರದ ಶಿಷ್ಟಾಚಾರದಂತೆ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಈ ಸಂಬoಧ ಸಮಿತಿಯವರು ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಂತ ಕವಿ ಶ್ರೀ ಕನಕದಾಸರ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.