ನವದೆಹಲಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಫೋಟೋವನ್ನು ವಾಣಿಜ್ಯ ಉತ್ಪನ್ನಗಳ ಜಾಹೀರಾತುಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಟ ಸಲ್ಮಾನ್ ಖಾನ್ ಅವರು ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಣೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಇಂದು (ಡಿ.11) ವಿಚಾರಣೆ ನಡೆಸಿದ ನ್ಯಾ. ಮನ್‌ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಪೀಠವು ಸಲ್ಮಾನ್ ಖಾನ್ ಅವರ ಹೆಸರು, ಫೋಟೋ ಮತ್ತು ಅವರ ವ್ಯಕ್ತಿತ್ವದ ಇತರ ಗುಣಚರ್ಯೆಗಳನ್ನು ವಾಣಿಜ್ಯ ಸರಕುಗಳ ಮಾರಾಟಕ್ಕಾಗಿ ದುರುಪಯೋಗಪಡಿಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿ, ಆದೇಶ ಹೊರಡಿಸಿದೆ.
ಐಟಿ ಮಧ್ಯಸ್ಥವೇದಿಕೆಗಳ ನಿಯಮಗಳ ಅಡಿಯಲ್ಲಿ ದೂರುದಾರರ ದೂರನ್ನು ಪರಿಗಣಿಸಲು ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ 3 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಸದ್ಯ ಅವರ ಹೆಸರಿನ ಮೇಲಿನ ಅನಧಿಕೃತ ವಾಣಿಜ್ಯ ಉತ್ಪನ್ನಗಳ ಜಾಹೀರಾತುಗಳಿಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಪೀಠ ಹೇಳಿದೆ.
ನಟ ಸಲ್ಮಾನ್ ಖಾನ್ ಅವರು ಅನಾಮಧೇಯ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ತಮ್ಮ ವ್ಯಕ್ತಿತ್ವದ ಹಕ್ಕನ್ನು ಅನಧಿಕೃತವಾಗಿ ಬಳಸದಂತೆ ತಡೆಯಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ವಾಣಿಜ್ಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದಕ್ಕೆ ತಡೆನೀಡಬೇಕು ಎಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದಕ್ಕೂ ಮುನ್ನ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್, ನಾಗಾರ್ಜುನ, ಅನಿಲ್ ಕಪೂರ್, ಜಾಕಿ ಶ್ರಾಫ್, ಕರಣ್ ಜೋಹರ್, ಆಧ್ಯಾತ್ಮಿಕ ಗುರುಗಳಾದ ಶ್ರೀ ರವಿಶಂಕರ್, ಜಗ್ಗಿ ವಾಸುದೇವ್ ಮತ್ತಿತರರ ವ್ಯಕ್ತಿತ್ವದ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ಈಗಾಗಲೇ ರಕ್ಷಣೆ ನೀಡಿದೆ.















