ಮನೆ ಸುದ್ದಿ ಜಾಲ ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಇಲ್ಲ – ಪಾಕಿಸ್ತಾನ ಸ್ಪಷ್ಟನೆ

ಭಯೋತ್ಪಾದಕರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು ಇಲ್ಲ – ಪಾಕಿಸ್ತಾನ ಸ್ಪಷ್ಟನೆ

0

ಕೆಲವೇ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಆತಂಕ ಆಗುವಂತಹ ಒಂದು ಸುದ್ದಿ ಹಬ್ಬಿತ್ತು. ಪಾಕಿಸ್ತಾನದ ಬಲೂಚಿಸ್ತಾನ್ ಸರ್ಕಾರವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ವದಂತಿ ಹರಡಿತ್ತು.

ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಅವರು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರ ಎಂಬ ಅರ್ಥದಲ್ಲಿ ಮಾತನಾಡಿದ್ದೇ ಇಷ್ಟಕ್ಕೆಲ್ಲ ಕಾರಣ ಆಗಿತ್ತು. ಈ ವಿಷಯಕ್ಕೆ ಸಂಬಂಧಿಸಿಂತೆ ಈಗ ಪಾಕಿಸ್ತಾನದ ಕಡೆಯಿಂದಲೇ ಅಧಿಕೃತ ಸ್ಪಷ್ಟನೆ ಸಿಕ್ಕಿದೆ. ಸಲ್ಮಾನ್ ಖಾನ್ ಅವರನ್ನು ಯಾವುದೇ ರೀತಿಯಲ್ಲಿ ಭಯೋತ್ಪಾದಕರ ಪಟ್ಟಿಗೆ ಸೇರಿಸಿಲ್ಲ ಎಂಬುದು ಖುಚಿತವಾಗಿದೆ.

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಫ್ಯಾಕ್ಟ್ ಚೆಕ್ ವಿಭಾಗದಿಂದ ಟ್ವೀಟ್ ಮಾಡಲಾಗಿದೆ. ಅದರಲ್ಲಿ ವದಂತಿಯನ್ನು ತಳ್ಳಿ ಹಾಕಲಾಗಿದೆ. ‘ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರದ ಯಾವುದೇ ದಾಖಲೆಯಲ್ಲೂ ಭಯೋತ್ಪಾದಕ ಎಂದು ಸೇರಿಸಿದ್ದು ಕಂಡುಬಂದಿಲ್ಲ. ಕೇವಲ ಭಾರತದ ಮಾಧ್ಯಮಗಳಲ್ಲಿ ವದಂತಿ ಹರಡಿದೆ. ಇದು ಕೇವಲ ವೈಭವೀಕರಿಸಿದ ಸುದ್ದಿಯೇ ಹೊರತು ನಿಜವಲ್ಲ’ ಎಂದು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಬಲೂಚಿಸ್ತಾನ್ ಕೂಡ ಪಾಕಿಸ್ತಾನದ ಭಾಗ. ಆದರೆ ಅಲ್ಲಿನ ಕೆಲವರು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ದುಬೈನಲ್ಲಿ ಮಾತನಾಡುವಾಗ ಬಲೂಚಿಸ್ತಾನವನ್ನು ಪ್ರತ್ಯೇಕ ದೇಶ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ಪಾಕಿಸ್ತಾನದಲ್ಲಿ ಸಲ್ಮಾನ್ ಖಾನ್ ವಿರುದ್ಧ ಅಸಮಾಧನ ಉಂಟಾಯಿತು.

ಪಾಕ್ ಸರ್ಕಾರವು ಸಲ್ಮಾನ್ ಖಾನ್ ಅವರ ಹೆಸರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂಬ ಫೇಕ್ ನ್ಯೂಸ್ ಹರಿದಾಡಿದಾಗ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಉಂಟಾಗಿತ್ತು. ಈಗ ಸ್ವತಃ ಪಾಕಿಸ್ತಾನದಿಂದಲೇ ಅದು ಫೇಕ್ ಎಂಬ ಸ್ಪಷ್ಟನೆ ಸಿಕ್ಕಿರುವುದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಈ ಎಲ್ಲ ಘಟನೆಗಳ ಬಗ್ಗೆ ಸಲ್ಮಾನ್ ಖಾನ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಶೂಟಿಂಗ್ ಮತ್ತು ಬಿಗ್ ಬಾಸ್ ನಿರೂಪಣೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ.