“ಸಂಭವಾಮಿ ಯುಗೇ ಯುಗೇ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರಿಗೆ ಚಿತ್ರದಲ್ಲೊಂದು ಗಟ್ಟಿ ಕಂಟೆಂಟ್ ಇರುವುದು ಎದ್ದು ಕಾಣುತ್ತಿದೆ. ರಾಜಲಕ್ಷ್ಮೀ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭವಾಮಿ ಯುಗೇ ಯುಗೇ’ ಚಿತ್ರ ಜೂ.21ರಂದು ತೆರೆಕಾಣುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ಚೇತನ್, “ಸಂಭವಾಮಿ ಯುಗೇ ಯುಗೇ’ ಚಿತ್ರ ಹಳ್ಳಿ ಹಿನ್ನೆಲೆಯಲ್ಲಿ ನಡೆಯುತ್ತದೆ. ಇಂದಿನ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಧರ್ಮ-ಅಧರ್ಮದ ನಡುವಿನ ಸಂಘರ್ಷ ಕೂಡಾ ಇಲ್ಲಿದೆ. ಅವೆಲ್ಲವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ತೋರಿಸಿದ್ದೇನೆ. ಇದೊಂದು ಕಂಟೆಂಟ್ ಸಿನಿಮಾ. ಶಿಕ್ಷಣ ಪಡೆದ ಪ್ರತಿಯೊಬ್ಬರು ಹಳ್ಳಿ ಬಿಟ್ಟು ಸಿಟಿ ಸೇರಿದರೆ ಮುಂದೊಂದು ಕೃಷಿ ಮಾಡುವವರೇ ಇಲ್ಲ ಎಂಬಂತಾಗುತ್ತದೆ.. ಇಂತಹ ಹಲವು ಅಂಶಗಳೊಂದಿಗೆ ನಮ್ಮ ಚಿತ್ರ ಸಾಗುತ್ತದೆ. ಮುಖ್ಯವಾಗಿ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲರ್ ಅಂಶಗಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎನ್ನುತ್ತಾರೆ.
ಪಕ್ಕಾ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಥ್ರಿಲ್ಲರ್, ಆ್ಯಕ್ಷನ್, ಲವ್, ಸೆಂಟಿಮೆಂಟ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಇವೆ ಎನ್ನುತ್ತಾರೆ.
ನಾಯಕ ಜಯ್ ಶೆಟ್ಟಿ ಕೂಡಾ ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಕಂಟೆಂಟ್. ಚಿತ್ರದ ಬಗ್ಗೆ ಮಾತನಾಡುವ ಅವರು, ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ ಎನ್ನುತ್ತಾರೆ.