ಮನೆ ಸುದ್ದಿ ಜಾಲ ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ; ಡಿಲೀಟ್‌ ಮಾಡಬಹುದು – ಸಿಂಧಿಯಾ ಸ್ಪಷ್ಟನೆ..!

ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ; ಡಿಲೀಟ್‌ ಮಾಡಬಹುದು – ಸಿಂಧಿಯಾ ಸ್ಪಷ್ಟನೆ..!

0

ನವದೆಹಲಿ : ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ. ಬಳಕೆದಾರರು ಯಾವುದೇ ಸಮಯದಲ್ಲಿ ಡಿಲೀಟ್‌ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಸಂಚಾರ್‌ ಸಾಥಿ ಅಪ್ಲಿಕೇಶನ್‌ ಮೂಲಕ ಜನರ ಮೇಲೆ ಬೇಹುಗಾರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದರು.

ಈ ಆ್ಯಪ್ ಸಂಪೂರ್ಣವಾಗಿ ಐಚ್ಛಿಕವಾಗಿದೆ. ನೀವು ಅದನ್ನು ಡಿಲೀಟ್‌ ಮಾಡಬೇಕಾದರೆ ಯಾವ ಸಮಯದಲ್ಲಿ ಬೇಕಾದರೂ ಡಿಲೀಟ್‌ ಮಾಡಬಹುದು. ಈ ಅಪ್ಲಿಕೇಶನ್ ಯಾವುದೇ ರೀತಿಯ ಕಣ್ಗಾವಲಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಗ್ರಾಹಕರಿಗೆ ಸಹಾಯ ಮಾಡುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರತಿಯೊಬ್ಬ ಗ್ರಾಹಕರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಂಚಾರ್ ಸಾಥಿಯಿಂದಾಗಿ ಸುಮಾರು 20 ಲಕ್ಷ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಸುಮಾರು 7.5 ಲಕ್ಷ ಕದ್ದ ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಅದನ್ನು ಅವರ ಸಾಧನಗಳಲ್ಲಿ ಇನ್‌ಸ್ಟಾಲ್‌ ಮಾಡುವುದು ಅನ್‌ಇನ್‌ಸ್ಟಾಲ್‌ ಮಾಡುವುದು ಬಳಕೆದಾರರಿಗೆ ಬಿಟ್ಟ ವಿಚಾರ. ಇದನ್ನು ಯಾವುದೇ ಇತರ ಅಪ್ಲಿಕೇಶನ್‌ನಂತೆ ಮೊಬೈಲಿನಿಂದ ಅಳಿಸಬಹುದು ಎಂದರು. ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಇನ್‌ಸ್ಟಾಲ್‌ ಮಾಡಬೇಕೆಂದು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್‌ ತಯಾರಕರಿಗೆ ಸೂಚಿಸಿದೆ ಎಂದು ವರದಿಯಾಗಿತ್ತು.

ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು 90 ದಿನಗಳ ಗಡುವು ನೀಡಲಾಗಿದ್ದು ಅದನ್ನು ಅನ್‌ ಇನ್‌ಸ್ಟಾಲ್ ಮಾಡಲು ಆಯ್ಕೆ ನೀಡಬಾರದು. ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ನೀಡುವಾಗ ಈ ಆ್ಯಪ್ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿತ್ತು.