ಬೆಂಗಳೂರು : ಗಂಧದ ಮರ ಕಳವು ಮಾಡಿದ್ದ ಆರೋಪದಲ್ಲಿ ಆರೋಪಿಯೊಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ಧ ದಂಡದ ಪ್ರಮಾಣ ಹೆಚ್ಚಳ ಮಾಡುವಂತೆ ಕೋರಿದ್ದ ರಾಜ್ಯ ಸರ್ಕಾರ ಮತ್ತು ಶಿಕ್ಷೆ ರದ್ದು ಕೋರಿ ಮಂಡ್ಯ ಜಿಲ್ಲೆ ಬಲ್ಲೆನಹಳ್ಳಯ ಆರೋಪಿ ದೇವರಾಜಚಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಎತ್ತಿಹಿಡಿದಿದೆ. ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಗಂಧದ ಮರ ಕಳವು ಆರೋಪ ಹಾಗೂ ಅಕ್ರಮವಾಗಿ ಸಂಗ್ರಹಿಸುವ ಸಂಬಂಧ ಮೊದಲ ಬಾರಿ ಆರೋಪ ಸಾಬೀತಾದ ಕೃತ್ಯದಲ್ಲಿ ಭಾಗಿಯಾದವರಿಗೆ 5 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಶಿಕ್ಷೆ ಇರಬಾರದು ಮತ್ತು 50 ಸಾವಿರಕ್ಕಿಂತಲೂ ಕಡಿಮೆ ದಂಡ ಇರಬಾರದು ಎಂದು ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್ 86 ಮತ್ತು 87ರಲ್ಲಿ ತಿಳಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯ ಸೆಕ್ಷನ್ 86ರಂತೆ 5 ವರ್ಷ ಶಿಕ್ಷೆ ವಿಧಿಸಿದ್ದು, 10 ಸಾವಿರ ರೂ. ದಂಡ ವಿಧಿಸಿತ್ತು. ಸೆಕ್ಷನ್ 87ರಲ್ಲಿ ತಿಳಿಸಿರುವಂತೆ 50 ಸಾವಿರಕ್ಕೂ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಖಾಯಂಗೊಳಿಸಿದ್ದು, ದಂಡದ ಮೊತ್ತವನ್ನು ಹೆಚ್ಚಳ ಮಾಡುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್ 86 ಮತ್ತು 87ರ ಅಡಿಯಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಎರಡೂ ಆರೋಪಗಳಿಗೆ ತಲಾ 50 ಸಾವಿರದಂತೆ 1 ಲಕ್ಷ ರೂಪಾಯಿಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ: 2006ರ ಮೇ 28ರ ರಾತ್ರಿ ರೈಲ್ವೇ ಪ್ರೋಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿ.ಎಲ್.ಜಾನ್ ಎಂಬುವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ 4.30ರ ವೇಳೆ ಮೈಸೂರಿನ ರೈಲ್ವೆ ಆಸ್ಪತ್ರೆಯ ಬಳಿ ಕೆಲವರು ಓಡಾಡುತ್ತಿರುವುದು ಗೊತ್ತಾಗಿತ್ತು. ಅವರನ್ನು ಬೆನ್ನಟ್ಟಿ ಒಬ್ಬರನ್ನು ಹಿಡಿದು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು. ಸ್ಥಳ ಪರಿಸೀಲನೆ ನಡೆಸುತ್ತಿದ್ದ ವೇಳೆ ಅಲ್ಲಿ ಶ್ರೀಗಂಧದ ಮರವನ್ನು ಕಡಿದಿದ್ದು, ಅದರ ಕೊಂಬೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮೈಸೂರಿನ ಆಶೋಕಪುರಂ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ಅರಣ್ಯ ಕಾಯ್ದೆಯ ವಿವಿಧ ಸೆಕ್ಷನ್‌ಗಳು ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರನ್ನು ಶಿಕ್ಷೆಗೆ ಗುರಿಪಡಿಸಿ ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಜತೆಗೆ, ಆರೋಪಿಗೆ ಅರಣ್ಯ ಕಾಯ್ದೆ ಉಲ್ಲಂಘನೆ ನಿಯಮದ ಪ್ರಕಾರ ಆರೋಪಿಗೆ 5 ವರ್ಷಗಳ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡ ವಿಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 2 ವರ್ಷಗಳ ಕಾಲ ಸಾಧಾರಣ ಶಿಕ್ಷೆ ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.