ಮನೆ ರಾಜ್ಯ ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ನಡೆದ ಸಂಘಪರಿವಾರದ ʼಏಕಾತ್ಮ ಮಾನವ ದರ್ಶನʼ ಕಾರ್ಯಕ್ರಮ..!

ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ನಡೆದ ಸಂಘಪರಿವಾರದ ʼಏಕಾತ್ಮ ಮಾನವ ದರ್ಶನʼ ಕಾರ್ಯಕ್ರಮ..!

0

ಮೈಸೂರು : ರಾಜ್ಯ ಸರಕಾರ ರದ್ದುಗೊಳಿಸಿ ಆದೇಶ ಮಾಡಿದ್ದರೂ ಸಂಘಪರಿವಾರದ ʼಏಕಾತ್ಮ ಮಾನವ ದರ್ಶನʼ ಭಾರತ್ ವಲ್ಡ್ ವ್ಯೂ ಅಂತರ್‌ರಾಷ್ಟ್ರೀಯ ಸಮ್ಮೇಳನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆಯಿತು.

ಪ್ರಜ್ಞ ಪ್ರವಾಹ ಮತ್ತು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳು ಆಯೋಜಿಸಿರುವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಸಂಘ ಪರಿವಾರದ ಕಾರ್ಯಕ್ರಮವಾಗಿದ್ದು, ಶಿಷ್ಟಾಚಾರ ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ ಅಧಿವೇಶನದಲ್ಲಿ ಚರ್ಚೆಯಾಗಿತ್ತು.

ಕಾರಣ ಕೇಳಿ ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಶರಣಪ್ಪ ವಿ.ಹಲಸೆ ಅವರಿಗೆ ನೋಟಿಸ್ ನೀಡಿತ್ತು.‌ ಇದಕ್ಕೆ ಉತ್ತರಿಸಿದ ಅವರು, ʼವಿಶ್ವವಿದ್ಯಾನಿಲಯದ ಅಧಿಕೃತ ಕಾರ್ಯಕ್ರಮ ಅಲ್ಲ, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಬಾಡಿಗೆಗೆ ನೀಡಿ ಕೆ.ಎಸ್.ಓ.ಯು ಖಾತೆಗೆ ಹಣ ಕಟ್ಟಿಸಿಕೊಳ್ಳಲಾಗಿದೆʼ ಎಂದು ಉತ್ತರ ನೀಡಿದ್ದರು.

ಇದನ್ನು ಒಪ್ಪದ ಉನ್ನದ ಶಿಕ್ಷಣ ಇಲಾಖೆ ಕಾರ್ಯಕ್ರಮ ರದ್ದುಗೊಳಿಸುವಂತೆ ಆದೇಶ ಮಾಡಿತ್ತು. ಆದರೂ ಕಾರ್ಯಕ್ರಮ ನಡೆಯಿತು. ರಾಜ್ಯ ಸರಕಾರ ರದ್ದುಗೊಳಿಸಿದ್ದರೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿಗಳೇ ನೇತೃತ್ವ ವಹಿಸಿಕೊಂಡು ಕಾರ್ಯಕ್ರಮ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ರಾಧಕೃಷ್ಣನ್ ವರ್ಚುವಲ್ ಭಾಷಣ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರಜ್ಞಾ ಪ್ರವಾಹ ದಕ್ಷಿಣ ಪ್ರಾಂತ ಸಂಚಾಲಕ ಪ್ರದೀಪ್ ಭಾರಧ್ವಾಜ್ ಉಪಸ್ಥಿತರಿದ್ದರು.