ಉಡುಪಿ(Udupi): ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜೊತೆಗಿದ್ದ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದು, ಸ್ಥಳಕ್ಕೆ ಮಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಬಂದಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ ಮಾಹಿತಿ ನೀಡಿದ್ದಾರೆ.
ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದು ಕಂಡುಬಂದ ನಂತರ ಪ್ರಾಥಮಿಕ ಸುತ್ತಿನ ಪಂಚನಾಮೆ ನಡೆಸಲು ಇಂದು ಪೊಲೀಸರ ತಂಡ ಲಾಡ್ಜ್ ಗೆ ಆಗಮಿಸಿತ್ತು.
ಇಂದು ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್, ಸಂತೋಷ್ ಪಾಟೀಲ್ ಸಂಬಂಧಿಕರು, ಕುಟುಂಬಸ್ಥರು ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ಶಾಂಭವಿ ಲಾಡ್ಜ್ ನ ಕೊಠಡಿಯನ್ನು ಬಂದೋಬಸ್ತ್ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಕೊಠಡಿಗೆ ಬೀಗ ಹಾಕಿದ್ದೇವೆ ಎಂದರು.
ಸಂತೋಷ್ ಪಾಟೀಲ್ ಸಂಬಂಧಿಕರು ಬಂದ ಮೇಲೆ ಇಂದು ಅಪರಾಹ್ನ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ.ಸದ್ಯ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 174ರಡಿಯಲ್ಲಿ ಸಂತೋಷ್ ಸಾವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಪಂಚನಾಮೆ ಮುಗಿದ ಮೇಲೆ ಸಂತೋಷ್ ಸಾವಿನ ಬಗ್ಗೆ ವಿವರಣೆ ನೀಡಬಹುದು, ನಮ್ಮ ಕಡೆಯಿಂದ ತನಿಖೆ ನಡೆಸುತ್ತೇವೆ ಎಂದರು.