ಮೈಸೂರು(Mysuru): ಸ್ಯಾಂಟ್ರೊ ರವಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ತಿಳಿಸಿದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೊ ರವಿ ಅವರ ಪತ್ನಿ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ದೂರುದಾರರು ದೂರಿನ ಜೊತೆಗೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಮದುವೆ ಕುರಿತಂತೆ ಭಾವಚಿತ್ರ, ಅಲ್ಲಿದ್ದವರ ವಿವರ ನೀಡುವಂತೆ ನೋಟಿಸ್ ಕೂಡ ನೀಡಿದ್ದೇವೆ ಎಂದು ತಿಳಿಸಿದರು.
2019ರಲ್ಲಿ ರವಿ ಜೊತೆಗೆ ಸಂತ್ರಸ್ತೆಯ ಮದುವೆ ನಡೆದಿದ್ದು, 2023ರ ಜ.2ರವರೆಗೆ ನಡೆದ ಎಲ್ಲ ಘಟನೆಗಳನ್ನು ದೂರಿನಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ಹಂತದ ಸಾಕ್ಷಿ ಪರಿಗಣಿಸಿ, ಕ್ರಮ ತೆಗೆದುಕೊಳ್ಳುತ್ತೇವೆ. ಸೂಕ್ತ ದಾಖಲೆಗಳು ಸಿಕ್ಕ ತಕ್ಷಣ ಬಂಧಿಸಲಾಗುವುದು. ದಿನಾಂಕವನ್ನು ಈಗಲೇ ತಿಳಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆತನ ಮೇಲೆ ದಾಖಲಾಗಿದ್ದ ಈ ಹಿಂದಿನ ಪ್ರಕರಣಗಳ ಆಧಾರದಲ್ಲಿ 2005ರಲ್ಲಿ ಆತನ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಅದೇ ಮಾನದಂಡವು ಮತ್ತೆ ಮುಂದುವರಿಯುವುದಿಲ್ಲ. ಈಗಿನ ಪ್ರಕರಣ ಆಧರಿಸಿ, ಮತ್ತೆ ಗೂಂಡಾ ಪ್ರಕರಣ ದಾಖಲಿಸಬೇಕಾಗುತ್ತದೆ. ಕಳೆದ ಐದು ವರ್ಷದಿಂದ ಬೆಂಗಳೂರಿನಲ್ಲಿಯೇ ರವಿ ವಾಸ್ತವ್ಯ ಹೊಂದಿದ್ದು, ಮೈಸೂರಿನಲ್ಲಿ ಯಾವುದೇ ಚಟುವಟಿಕೆ ಹೊಂದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸರ ವರ್ಗಾವಣೆ ವಿಚಾರದಲ್ಲಿ ಹಣದ ವ್ಯವಹಾರ ನಡೆದಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಮ್ಮಲ್ಲಿ ಯಾರೂ ದೂರು ನೀಡಿಲ್ಲ. ಮೈಸೂರು ಹೊರತುಪಡಿಸಿ, ಬೇರೆಡೆ ನಡೆದ ಪ್ರಕರಣದ ಕುರಿತಂತೆ ಯಾವುದೇ ಪ್ರತಿಕ್ರಿಯಿಸಲ್ಲ ಎಂದರು.