ಹುಬ್ಬಳ್ಳಿ: ಸ್ಯಾಂಟ್ರೊ ರವಿ ಬಗ್ಗೆ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದೆ. ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ನಿವಾಸದಲ್ಲಿ ಮಾತನಾಡಿದ ಅವರು, ಆತನಿಗೆ 20 ವರ್ಷದ ಇತಿಹಾಸವಿದೆ. ಕಾಂಗ್ರೆಸ್ ಕಾಲದಲ್ಲೇ ಆತ ಜೈಲಿನಿಂದ ಹೊರಬಂದಿದ್ದಾನೆ. ಆತ ಯಾರ ಜತೆಗೆ ನಂಟು ಹೊಂದಿದ್ದ, ಹಿನ್ನೆಲೆ ಏನು ಎಂಬುವುದೆಲ್ಲಾ ಗೊತ್ತಿದೆ ಎಂದರು.
ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿ, ಸಂವಿಧಾನಬದ್ದವಾಗಿ ಮೀಸಲಾತಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿ ಬಹಳ ಮುಖ್ಯ. ಹೀಗಾಗಿ ಅವರ ವರದಿಗಾಗಿ ಕಾಯುತ್ತಿದ್ದೇವೆ ಎಂದರು. ಮಹದಾಯಿ ವಿಚಾರವಾಗಿ ಅರಣ್ಯ ಇಲಾಖೆ ಸ್ಪಷ್ಟನೆ ಕೇಳೋದು ಸಾಮಾನ್ಯ. ಈ ಹಿಂದೆ ಸಾಕಷ್ಟು ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ವಿಚಾರ. ನಾನು ವ್ಯಾಖ್ಯಾನ ಮಾಡುವುದಿಲ್ಲ. ಎಲ್ಲೆಡೆ ನಿಲ್ಲಲು ಅವರು ಸರ್ವ ಸ್ವತಂತ್ರರು. ಆದರೆ ತೀರ್ಮಾನವನ್ನು ಕೋಲಾರದ ಜನತೆ ಮಾಡುತ್ತಾರೆ ಎಂದು ಸೂಚ್ಯವಾಗಿ ನುಡಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಇದಕ್ಕೆ ಮಹತ್ವ ನೀಡಲಾಗಿದ್ದು ಮಾನವ ಸಂಪನ್ಮೂಲವೇ ಬಹು ದೊಡ್ಡ ಕೊಡುಗೆ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.