ಮೈಸೂರು : ಜೆಡಿಎಸ್ ಪಕ್ಷದ ಮಾಜಿ ಸಚಿವ ಸಾ.ರಾ.ಮಹೇಶ್ ಕುಟುಂಬದ ಒಡೆತನದ ಸಾರಾ ಕನ್ವೆನ್ಷನ್ ಹಾಲ್ ಜಾಗದ ಬಗ್ಗೆ ತನಿಖೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ.ಲತಾ ಆದೇಶ ಹೊರಡಿಸಿದ್ದಾರೆ.
ಸಾರಾ ಕನ್ವೆನ್ಶನ್ ಹಾಲ್ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಇದಕ್ಕೆ ಅಧಿಕಾರಿಗಳು ಸಹಕರಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಮುಡಾ ಅಕ್ರಮಗಳ ಬಗ್ಗೆ ಹಲವಾರು ಮಾಹಿತಿ ಬಹಿರಂಗ ಪಡಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜ್, ಅವರಿಂದ ಈ ಬಗ್ಗೆ ದೂರು ನೀಡಲಾಗಿತ್ತು. ಮೈಸೂರಿನ ದಟ್ಟಗಳ್ಳಿಯ ೧೩೦/೩ ರ ೨ ಎಕರೆ ೧೫ ಗುಂಟೆ ಜಾಗದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ. ಒತ್ತುವರಿ ಹಾಗೂ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮೈಸೂರಿನ ದಟ್ಟಗಳ್ಳಿ ಸಾರಾ ಕನ್ವೆಂಷನ್ ಹಾಲ್ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಶಾಸಕ ಸಾ.ರಾ.ಮಹೇಶ್ ಕುಟುಂಬದ ಒಡೆತನದ ಈ ಕಟ್ಟಡದ ಅಕ್ರಮದ ಬಗ್ಗೆ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಸರಕಾರಕ್ಕೆ ದೂರು ನೀಡಿದ್ದರು. ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿದ್ದಾರೆ. ಅಲ್ಲದೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಭೂಮಿಯನ್ನು ಅಂದಿನ ಮುಡಾ ಆಯುಕ್ತ ನಟೇಶ್ರಿಂದ ಬಹಿರಂಗ ಹಾರಾಜಿನಲ್ಲಿ ಖರೀದಿ ಮಾಡಿದ್ದಾರೆ.
ಅದು ಕೂಡ ಕಾನೂನು ಬಾಹಿರ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈಗ ಸರ್ಕಾರದ ಅಧೀನ ಕಾರ್ಯದರ್ಶಿ ತನಿಖೆಗೆ ಪತ್ರ ಬರೆದಿದ್ದಾರೆ. ನಗರ ಹಾಗೂ ಗ್ರಾಮಾಂತರ ಯೋಜನ ಆಯುಕ್ತರಿಗೆ ಸರ್ಕಾರದಅಧೀನ ಕಾರ್ಯದರ್ಶಿ ಲತಾ ಅವರು ಸೂಚನೆ ನೀಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಮಾಧ್ಯಮಗಳಿಗೆ ತಿಳಿಸಿದರು.
ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಅವಧಿಯಲ್ಲೂ ಈ ಕಟ್ಟಡದ ಅಕ್ರಮದ ಬಗೆಗೆ ಸದ್ದು ಕೇಳಿ ಬಂದಿತ್ತು. ಸಾರಾ ಕನ್ವೆನ್ಶನ್ ಹಾಲ್ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಖುದ್ದು ರೋಹಿಣಿ ಸಿಂಧೂರಿ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆನಂತರದ ಬೆಳವಣಿಗೆಗಳಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನೇ ರಾಜ್ಯ ಸರಕಾರ ಮೈಸೂರಿಂದ ಎತ್ತಂಗಡಿ ಮಾಡಿತ್ತು.














