ಮೈಸೂರು(Mysuru): ಸುತ್ತೂರು ಕ್ಷೇತ್ರವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿನ ಚಟುವಟಿಕೆಗಳು ಎಲ್ಲರನ್ನೂ ಒಳಗೊಂಡಿರುವುದು ಮಾದರಿಯಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುತ್ತೂರು ಮಠವು ವೈಚಾರಿಕ ಕ್ರಾಂತಿಯಲ್ಲಿ ತೊಡಗಿದೆ. ಕೋವಿಡ್ ಸಂಕಷ್ಟದಿಂದಾಗಿ ಎರಡು ವರ್ಷ ಜನಜೀವನದ ಮೇಲೆ ಮಂಕು ಕವಿದಿತ್ತು. ದೇವರ ಕೃಪೆಯಿಂದಾಗಿ ಈಗ ಎಲ್ಲವೂ ಸುಧಾರಿಸಿದೆ. ಇದರಿಂದಾಗಿ ಜಾತ್ರೆಯೂ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿ ಅಂತರ್ಜಾತಿ ವಿವಾಹದ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸುತ್ತೂರು ಪವಿತ್ರ ಧರ್ಮಕ್ಷೇತ್ರವಾಗಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿರುವುದು ಮಾದರಿಯಾಗಿದೆ. ಧಾರ್ಮಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಫಲಾಪೇಕ್ಷೆ ಬಯಸದೇ ಕೆಲಸ ಮಾಡುತ್ತಿರುವ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಜಾತ್ರೆ ಎಂದರೆ ಮನರಂಜನೆ ಅಷ್ಟೇ ಅಲ್ಲ ಎನ್ನುವುದನ್ನು ತಿಳಿಸಿಕೊಡುವುದಕ್ಕಾಗಿ ಎಲ್ಲ ಜಾತಿ, ಧರ್ಮೀಯರಿಗೆ ವಿವಾಹವಾಗಲು ಅವಕಾಶ ಕಲ್ಪಿಸುವ ಮೂಲಕ ವೈಚಾರಿಕ ಕ್ರಾಂತಿಯನ್ನೂ ಇಲ್ಲಿ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸುತ್ತೂರು ಜಾತ್ರೆ ನೋಡಲು ಎರಡು ಕಣ್ಣುಗಳು ಸಾಲದು. ಈ ಮಠ ಮಾಡುತ್ತಿರುವ ದೇಶಸೇವೆಯು ಅಪಾರವಾದುದು ಎಂದರು.
ನವ ವಿವಾಹಿತರು ಜೋಡೆತ್ತುಗಳಂತೆ ಜೊತೆಯಲ್ಲಿ ಸಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ, ಜೆ.ಕೆ.ಟೈರ್ಸ್ ಕಂಪನಿಯ ಉಪಾಧ್ಯಕ್ಷ ವುಪ್ಪು ಈಶ್ವರರಾವ್, ಶಾಸಕ ಎಸ್.ಎ.ರಾಮದಾಸ್, ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಆದಾಯ ತೆರಿಗೆ ಇಲಾಖೆಯ ಆಯುಕ್ತ ಸತೀಶ್, ಎಸ್ಪಿ ಸೀಮಾ ಲಾಟ್ಕರ್ ಮಾತನಾಡಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕೋಪಯೋಗಿ ಸಚಿವ ಸಿ.ಟಿ.ಪಾಟೀಲ ಮಾಂಗಲ್ಯ ವಿತರಿಸಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.