ಮನೆ ರಾಜಕೀಯ ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ಸತ್ಯಮೇವ ಜಯತೇ ನಾಪತ್ತೆ: ಹೆಚ್.ಡಿ.ಕುಮಾರಸ್ವಾಮಿ ಅಚ್ಚರಿ

ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ಸತ್ಯಮೇವ ಜಯತೇ ನಾಪತ್ತೆ: ಹೆಚ್.ಡಿ.ಕುಮಾರಸ್ವಾಮಿ ಅಚ್ಚರಿ

0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಂದ ಜಾಹೀರಾತುಗೊಸ್ಕರವೇ ನಡೆಯುತ್ತಿರುವ ಸರ್ಕಾರ. ಅಚ್ಚರಿ ಎಂದರೆ ಸರ್ಕಾರದ ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ಸತ್ಯಮೇಯ ಜಯತೇ ವಾಕ್ಯ ನಾಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

Join Our Whatsapp Group

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ಈ ಸರ್ಕಾರ ಕೆಲಸದಲ್ಲಿ ಅಸಮರ್ಥ, ಪ್ರಚಾರದಲ್ಲಿ ಮಾತ್ರ ಶರವೇಗದಲ್ಲಿ ಇದೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯದಲ್ಲಿ ಈಗಿನ ಸರ್ಕಾರದ ವೈಫಲ್ಯಗಳೇ ಎದ್ದು ಕಾಣುತ್ತಿವೆ‌. ಈ ರಾಜ್ಯದಲ್ಲಿ ನಿಜಕ್ಕೂ ಸರ್ಕಾರ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಪ್ರತಿದಿನವೂ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿವೆ. ಈ ಸರ್ಕಾರ ಜಾಹೀರಾತು ಮೇಲೆ ನಡೆಯುತ್ತಿದೆ. ಬೆಂಗಳೂರನಲ್ಲಿ ಮಳೆಯ ಅನಾಹುತದಿಂದ ಜನರು ಕಂಗೆಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರು ಕೂಡ ನಷ್ಟ ಅನುಭವಿಸುತ್ತಿದ್ದಾರೆ‌. ಬೆಳೆಗಳು ನಷ್ಟವಾಗುತ್ತಿವೆ. ಹಿಂಗಾರು ಮಳೆಯಿಂದ ರೈತರು ಸಂಕಷ್ಟ ಸಿಲುಕಿದ್ದಾರೆ‌. ಆದರೆ, ಜನರ ನೆರವಿಗೆ ಸರಕಾರ ಧಾವಿಸುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ಬೆಂಗಳೂರಿಗೆ ಬೆಂಗಳೂರು ನಗರವೇ ಪ್ರವಾಹದಲ್ಲಿ ಮುಳುಗಿತು. ಆದರೆ, ಮುಖ್ಯಮಂತ್ರಿಯಾಗಲಿ, ಯಾವೊಬ್ಬ ಸಚಿವರೂ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟ ವಿಚಾರಿಸಲಿಲ್ಲ. ಸಿಎಂ ಮಳೆಯ ಬಗ್ಗೆ ಒಂದು ಹೇಳಿಕೆ‌ ಕೂಡ ಕೊಡಲಿಲ್ಲ. ಬೆಂಗಳೂರಿನಲ್ಲಿ ನೀರು ತುಂಬಿದ್ದರೆ ಅರ್ಧ ಗಂಟೆಯಲ್ಲಿ ಖಾಲಿ ಮಾಡೋದು ನಮಗೆ ಗೊತ್ತಿದೆ ಅಂತ ಡಿಸಿಎಂ ಹೇಳುತ್ತಾರೆ. ಜನರಿಗೆ ಊಟ ಇಲ್ಲ, ಮಲಗಲು ಜಾಗ ಇಲ್ಲ, ಮನೆಗಳಲ್ಲಿ ನೀರು ತುಂಬಿದೆ. ಹೊಟೇಲ್‌ನಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ‌‌. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದವರು ಬೆಂಗಳೂರು ನಗರವನ್ನು ಮಳೆಯಲ್ಲಿ ಮುಳುಗಿಸಿದ್ದಾರೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಬೆಂಗಳೂರಿನ ಹೆಸರು ಹಾಳು ಮಾಡುವ ಕೆಲಸ ವಿಪಕ್ಷಗಳು ಮಾಡುತ್ತಿವೆ ಎಂದು ಡಿಸಿಎಂ ಹೇಳಿದ್ದಾರೆ. ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿ ಒಂದೂವರೆ ವರ್ಷ ಆಯಿತು. ಆದರೆ, ಒಳಚರಂಡಿ ವ್ಯವಸ್ಥೆ ಯಾಕೆ ಸರಿ ಮಾಡಲಿಲ್ಲ, ರಸ್ತೆಗಳನ್ನು ನದಿಗಳಂತೆ ದೃಶ್ಯ ಮಾಧ್ಯಮಗಳಲ್ಲಿ ಕಾಣುತ್ತಿದ್ದವು. ಇದಕ್ಕೆ ಪ್ರಕೃತಿ ಹೊಣೆಯೇ? ಮಳೆ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲವೇ? ಮಾಧ್ಯಮಗಳೇ ಎಲ್ಲವನ್ನೂ ತೋರಿಸುತ್ತಿವೆ, ನಾವು ಹೇಳುವುದು ಏನೂ ಉಳಿದಿಲ್ಲ ಎಂದು ಕೇಂದ್ರ ಸಚಿವರು ಟಾಂಗ್ ನೀಡಿದರು.

ಇಷ್ಟೆಲ್ಲ ಅನಾಹುತ ಆಗಿದೆ. ಯಾವ ಕ್ರಮ ಕೈಗೊಳ್ಳುತ್ತೇವೆ ಅಂತ ಸ್ಪಷ್ಟವಾಗಿ ಹೇಳದ ಸರ್ಕಾರ ಪ್ರಚಾರದಲ್ಲಿ ಮಾತ್ರ ಸದಾ ಮುಂದೆ ಇರುತ್ತದೆ. ಜನರಿಗೆ ಮಾನಸಿಕ ಸ್ಥೈರ್ಯ ಹೇಳದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವ ಇವರಿಗೆ ನಾಚಿಕೆ ಆಗಬೇಕು. 110 ಹಳ್ಳಿಗೆ ನೀರು ನೀಡ್ತಿದ್ದೇವೆ ಅಂತ ಬಡಾಯಿ ಕೊಚ್ಚಿಕೊಂಡಿದ್ದಾರೆ‌. ಈ ಕುಮಾರಸ್ವಾಮಿಯೇ ಅಷ್ಟೂ ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತಂದಿದ್ದು. ಇವರು ದಿನಕ್ಕೊಂದು ಶಂಕುಸ್ಥಾಪನೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕುಮಾರಸ್ವಾಮಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಅಂತ ಸಿಎಂ ಹೇಳಿದ್ದರು. ಕೇಂದ್ರ ಯೋಜನೆ‌ಯಾದ JNRUM ಸ್ಕೀಮ್ ಮೂಲಕ ಬೆಂಗಳೂರಿನ ಹೊರ ಹೊಲಯದ ಹಳ್ಳಿಗಳನ್ನು ನಗರಕ್ಕೆ ಸೇರಿಸುವ ಕೆಲಸ ಮಾಡಿದ್ದೇ ನಾನು. 7 ನಗರ ಸಭೆಗಳನ್ನು ಬಿಬಿಎಂಪಿಗೆ ಸೇರಿಸಿದ್ದು ನಾನು. 2007ರಲ್ಲಿಯೇ ₹9,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು.

ಡಿಸಿಎಂ ಹೊಸದಾಗಿ ಟೌನ್ ಶಿಫ್ ಮಾಡಲು ಹೊರಟಿದ್ದಾರೆ. ಯಾರಿಗಾಗಿ ಈ ಟೌನ್ ಶಿಪ್? ತನಗೆ ಬೇಕಾದ ರಿಯಲ್ ಎಸ್ಟೇಟ್ ಕುಳಗಳನ್ನು ಉದ್ಧಾರ ಮಾಡುವುದಕ್ಕೆ ಈ ಟೌನ್ ಶಿಪ್ ಮಾಡಲಾಗುತ್ತಿದೆಯಾ? ಅಭಿವೃದ್ಧಿ ಆದ ಮೇಲೆ 50:50 ಮಾಡುತ್ತಾರಂತೆ. ಮೈಸೂರಿನ ಮುದಾಡಲ್ಲಿ 50:50 ನೋಡಿದ್ದೇವೆ ಅಲ್ಲವೇ? ಬ್ರ್ಯಾಂಡ್ ಬೆಂಗಳೂರು ಮಾಡುತ್ತಾರಂತೆ ಇವರ ಯೋಗ್ಯತೆಗೆ.. ಐದು ಪೈಸೆ ಅನುದಾನ ಇಟ್ಟಿಲ್ಲ. ಬರುವ ಹಣವನ್ನೆಲ್ಲಾ ಕೊಳ್ಳೆ ಹೊಡೆಯುತ್ತಿದ್ದಾರೆ. ಇವರು ಅಭಿವೃದ್ಧಿ ಮಾಡ್ತಾರಂತೆ.. ನಾಚಿಕೆ ಆಗಬೇಕು ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನೈಸ್ ರಸ್ತೆಯ ಬಗ್ಗೆ ಸದನ ಸಮಿತಿ ವರದಿ ಎನ್ ಮಾಡಿದಿರಿ?

ಡಿಸಿಎಂ ನೈಸ್ ರಸ್ತೆ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರು ಅಡ್ಡಿ ಮಾಡಿದ್ದರಿಂದ ರಸ್ತೆ ಅಗಲಿಲ್ಲವಂತೆ. ಯಾರು ಮಾಡಬೇಡಿ ಅಂತ ಹೇಳಿದರು ಇವರಿಗೆ? ಇಷ್ಟು ದಿನ ಯಾಕೆ ಸುಮ್ಮನೆ ಇದ್ದರು? ನೈಸ್ ಗೆ ವಶಪಡಿಸಿಕೊಂಡಿದ್ದ ರೈತರ ಭೂಮಿಯನ್ನು ಕಬಳಿಕೆ ಮಾಡಿ ಡೈನೋಟಿಫೈ ಮಾಡಿಕೊಂಡವರು ಯಾರು? ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ನೈಸ್ ರಸ್ತೆ ಬಗ್ಗೆ ಸದನ ಟಿ.ಬಿ.ಜಯಚಂದ್ರ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಏನು ಮಾಡಿದಿರಿ? ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆ ಸಮಿತಿ ಶಿಫಾರಸು ಮಾಡಿತ್ತು? ಹೊಸಕೆರೆಹಳ್ಳಿ ಬಳಿ ಶೋಭಾ ಡೌಲಪರ್ಸ್ ಬಿಲ್ಡಿಂಗ್ ಕಾಮಗಾರಿ ನಡೆಯುತ್ತಿದೆ. ಅದರ ಪಾಲುದಾರರು ಯಾರಪ್ಪ? ನೈಸ್ ಹೆಸರಿನಲ್ಲಿ ರೈತರ ಜೀವನ ಹಾಳು ಮಾಡಿದವರು ನೀವು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐ ತನಿಖೆಗೆ ಕೊಡಬೇಕು ಎಂದು ಜಯಚಂದ್ರ ಶಿಫಾರಸು ಮಾಡಿದ್ದರು. ಆದರೆ ಸಿಎಂ ಡಿಐಎಂಗೆ ಜಾಣಕಿವುಡು. ಧೈರ್ಯ ಮಾಡಿ ಜಯಚಂದ್ರ ವರದಿ ಕೊಟ್ಟರೆ ಅವರಿಗೆ ಜೀವ ಬೆದರಿಕೆ ಹಾಕಲಾಯಿತು. ಯಾರು ಜೀವ ಬೆದರಿಕೆ ಹಾಕಿದ್ದು? ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅದು ಯಾವ ಹಂತದಲ್ಲಿದೆ ಎಂದು ಸಚಿವರು ಪ್ರಶ್ನಿಸಿದರು.

ಮೇಕೆದಾಟು ಅಂತ ಡ್ಯಾನ್ಸ್ ಮಾಡಿದ್ದರು!!

ಮೇಕೆದಾಟು ಯೋಜನೆಗೆ ಕುಮಾರಸ್ವಾಮಿ ಅವರು ಅನುಮತಿ ಕೊಡಸಬೇಕು ಎಂದು ಸಿಎಂ, ಡಿಸಿಎಂ, ಸಚಿವರು ಹೇಳುತ್ತಿದ್ದಾರೆ. ಪಾದಯಾತ್ರೆ ಮಾಡಿಕೊಂಡು ಡ್ಯಾನ್ಸ್ ಮಾಡಿದ್ರಲ್ಲಪ್ಪ? ಕೇಂದ್ರ ಸರಕಾರದ ಬಳಿ ಯಾವ ರೀತಿ ಅನುಮತಿ  ಪಡೆಯಬೇಕು ಅಂತ ಪರಿಜ್ಞಾನ ಇಲ್ಲ ಇವರಿಗೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ ಆಗುತ್ತದೆ. ಅಲ್ಲಿ ಇವರ ಮಿತ್ರಪಕ್ಷ ಡಿಎಂಕೆ ಇದೆಯಲ್ಲ, ಅವರ ಮನವೊಲಿಕೆ ಮಾಡಲಿ. ಆಮೇಲೆ ಇವರು ನಮ್ಮ ಬಳಿಗೆ ಬರಲಿ. ಕೇಂದ್ರ ಸರ್ಕಾರದ ಬಳಿ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲ ಎಂದು ಟಾಂಗ್ ನೀಡಿದರು ಕೇಂದ್ರ ಸಚಿವರು.

ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಟಿ.ಎನ್.ಜವರಾಯ ಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.