ಮೈಸೂರು: ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಹಾಗೂ ಅವರ ಸಂಸ್ಕೃತಿಯನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಚಲನಚಿತ್ರ ನಟ ಕಾರ್ತಿಕ್ ಮಹೇಶ್ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ‘ಜೆಎಸ್‌ಎಸ್ ಕಲಾಮಂಟಪ’ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಜೆಎಸ್‌ಎಸ್ ರಂಗೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
8 ಕೆ.ಜಿ ತೂಕವಿರುವ ಡೊಳ್ಳು ಹೊತ್ತು ದಿನವಿಡೀ ಪ್ರದರ್ಶನ ನೀಡುವ ಕಲಾವಿದರಿದ್ದಾರೆ. ಕಲೆಯನ್ನು ಸಿದ್ಧಿಸಿಕೊಳ್ಳುವುದು ಸುಲಭವಲ್ಲ. ಆದರೆ, ಒಮ್ಮೆ ಕಲಿತರೆ ಕಲಾವಿದರ ಜೀವನವೇ ವರ್ಣಮಯವಾಗಿರುತ್ತದೆ ಎಂದು ಹೇಳಿದರು.
ರಂಗಕಲೆಗಳು ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ನಾಯಕತ್ವ ಗುಣ ಕೂಡ ಬೆಳೆಯುತ್ತದೆ. ಹೀಗಾಗಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಸಂಸ್ಥೆಯು ಆಯೋಜಿಸುತ್ತಿದ್ದ ಎಳೆಯರ ಮೇಳದಲ್ಲಿ ಕಂಸಾಳೆ ಕಲಿಯಲು ದಶಕದ ಹಿಂದೆ ಬಂದಿದ್ದೆ. ಕಲೆಯೇ ನನ್ನನ್ನು ಜೀವನವನ್ನು ರೂಪಿಸಿದೆ. ಎಲ್ಲರೊಂದಿಗೆ ಬೆರೆಯುವ ಹಾಗೂ ಕಲಿಯುವ ಅವಕಾಶವನ್ನು ನೀಡುವ ಕಲಾ ಪ್ರಕಾರಗಳು ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನೂ ನೀಡುತ್ತದೆ ಎಂದರು.
ವಿದ್ಯಾರ್ಥಿಗಳು ಕಲಿಕೆಗೆ ಮಾತ್ರ ಮೊಬೈಲ್ ಬಳಸಬೇಕೇ ಹೊರತು ಅದಕ್ಕೆ ದಾಸರಾಗಬಾರದು. ಪೋಷಕರೂ ಸಹ ಮಕ್ಕಳಿಗೆ ಮೊಬೈಲ್ ತೋರಿಸಿ ಮಗುವಿಗೆ ಊಟ ಮಾಡಿಸುತ್ತಿದ್ದಾರೆ. ದಶಕದ ಹಿಂದೆ ಚಂದ್ರ, ಪ್ರಾಣಿ– ಪಕ್ಷಿಗಳನ್ನು ತೋರಿ ಮಗುವಿಗೆ ಕೈತುತ್ತು ತಿನ್ನಿಸುತ್ತಿದ್ದ ಅಮ್ಮಂದಿರು ಇಂದಿನ ಪೋಷಕರಿಗೆ ಆದರ್ಶವಾಗವೇಕು. ಮೊಬೈಲ್ ಜೀವನದ ಒಂದು ಭಾಗವಷ್ಟೇ. ಅದೇ ಜೀವನವಲ್ಲ ಎಂದು ಕಾರ್ತಿಕ್ ಪ್ರತಿಪಾದಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.
ಕಾರ್ಯಕ್ರಮದ ನಂತರ ಸಿದ್ಧಾರ್ಥ ಬಡಾವಣೆಯ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಶಕುಂತಲಾ ಹೆಗಡೆ ನಿರ್ದೇಶನದ ಕೋಟಿಗಾನಹಳ್ಳಿ ರಾಮಯ್ಯ ರಚನೆಯ ‘ಒಗಟಿನ ರಾಣಿ’ ನಾಟಕ ಪ್ರದರ್ಶಿಸಿದರು.