ಮೈಸೂರು: ಸವಾಲ್ ವಾಹಿನಿಯ ವರದಿಗೆ ಫಲಶ್ರುತಿ ದೊರೆತಿದ್ದು, ಯುವತಿಯ ಸಾವಿಗೆ ಕಾರಣವಾದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿನ ತಾಮರ ಹೆಲ್ತ್ ಕೇರ್ ಸೆಂಟರ್ ಅನ್ನು ಬೀಗ ಮುದ್ರೆಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಆದೇಶಿಸಿದ್ದಾರೆ.
ತಾಮರ ಹೆಲ್ತ್ ಕೇರ್ ನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಹಾಗೂ ಇದೇ ತಿಂಗಳಲ್ಲಿ ಸಂಸ್ಥೆಯ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಅನುಮಾನಸ್ಪದವಾಗಿ ಸಾವಿನ ಕುರಿತು ಸವಿವರವಾಗಿ ಸವಾಲ್ ವಾಹಿನಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಹಿನ್ನಲೆ ತಾಮರ ಹೆಲ್ತ್ ಕೇರ್ ಗೆ ಬೀಗ ಜಡಿಯಲು ತಾಲ್ಲೂಕು ಆಡಳಿತ ಮುಂದಾಗಿದೆ.
ತಾಲ್ಲೂಕು ಆರೋಗ್ಯಾಧಿಕಾರಿಗಳ ಆದೇಶದಲ್ಲೇನಿದೆ ?
ತಾಮರ ಹೆಲ್ತ್ ಕೇರ್ ಸಂಸ್ಥೆಯ ವಿರುದ್ಧ ಹಲವಾರು ದೂರುಗಳಿದ್ದು, ಕೆಪಿಎಂಇ ವತಿಯಿಂದ ಪರವಾನಿಗೆಯನ್ನು ಕೂಡ ಪಡೆಯದೇ ಸಂಸ್ಥೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ಅಲ್ಲದೇ ತಾಮರ ಹೆಲ್ತ್ ಕೇರ್ ಸಂಸ್ಥೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಮತಾ.ಎಸ್ ಫೆ.15 ರಂದು ಜಾರಿ ಬಿದ್ದು ಮೃತಪಟ್ಟಿರುವ ಬಗ್ಗೆ ದೂರನ್ನು ನೀಡಲಾಗಿದ್ದು, ದೂರಿನಲ್ಲಿ ಸಂಸ್ಥೆಯ ವಿರುದ್ಧ ಗುರುತರ ಆರೋಪಗಳು ಕೇಳಿಬಂದಿದೆ.
ಮೃತ ಮಮತಾ ತಾಯಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ತಾವು ಮೃತಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿರುವ ಬಗ್ಗೆ ಮಾಹಿತಿಯನ್ನು ಕೋರಿದ್ದು, ತಾವು ಮೃತಳಿಗೆ ಸಂಬಂಧಿಸಿದಂತೆ ಯಾವ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಹಾಜರುಪಡಿಸದೇ ಇರುವ ಸಂಬಂಧ ತಮ್ಮ ಮೇಲಿರುವ ಈ ಎಲ್ಲಾ ಆರೋಪಗಳನ್ನು ಪರಿಗಣಿಸಿ ತಮ್ಮ ಸಂಸ್ಥೆಯನ್ನು ತಾತ್ಕಾಲಿಕವಾಗಿ ಬೀಗ ಮುದ್ರೆಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತಾಮರ ಹೆಲ್ತ್ ಕೇರ್ ನಲ್ಲಿ ದಾಖಲಾಗಿರುವ ವಯೋವೃದ್ಧರನ್ನು ಹಾಗೂ ಇತರೆ ಸಿಬ್ಬಂದಿ ವರ್ಗದವರನ್ನು ಅವರವರ ಪೋಷಕರ ಸುಪರ್ದಿಗೆ 10 ದಿನದೊಳಗೆ ಹಸ್ತಾಂತರಿಸಿ ತಮ್ಮ ಸಂಸ್ಥೆಯನ್ನು ಖಾಲಿ ಮಾಡಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ಯಾವುದಾದರೂ ಅವಘಡ ಸಂಭವಿಸಿದಲ್ಲಿ ಸಂಸ್ಥೆಯವರೇ ಹೊಣೆಗಾರರೆಂದು ಎಚ್ಚರಿಕೆ ನೀಡಿದ್ದು, ಕ್ರಮ ವಹಿಸಿದ ನಂತರ ತಾಮರ ಸಂಸ್ಥೆಯನ್ನು ಬೀಗ ಮುದ್ರೆಗೊಳಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.