ನವದೆಹಲಿ : ಪರಿಶಿಷ್ಟ ಜಾತಿ ಸ್ಥಾನಮಾನದ ಕುರಿತು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಹಿಂದೂ, ಸಿಖ್, ಬೌದ್ಧ ಧರ್ಮ ಹೊರತುಪಡಿಸಿ ಬೇರೆ ಧರ್ಮಗಳಿಗೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಂಧ್ರಪ್ರದೇಶ ಹೈಕೋರ್ಟ್ 2025ರ ಮೇ ತಿಂಗಳಲ್ಲಿ ನೀಡಿದ್ದ ತೀರ್ಪನ್ನ ಪ್ರಶ್ನಿಸಿ ಪಾದ್ರಿ ಒನ್ ಚಿಂತದ ಆನಂದ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಕೆ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪು ಪ್ರಕಟಿಸಿದೆ. ಬೇರೆ ಧರ್ಮವನ್ನ ಪ್ರತಿಪಾದಿಸುವ ಯಾರನ್ನೂ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹಿಂದೂ ಧರ್ಮ, ಸಿಖ್ ಅಥವಾ ಬೌದ್ಧ ಧರ್ಮವನ್ನ ಪ್ರತಿಪಾದಿಸುವ ಪರಿಶಿಷ್ಟ ಜಾತಿ (ಎಸ್ಸಿ) ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಅವರ ಪರಿಶಿಷ್ಟ ಜಾತಿ ಸ್ಥಾನಮಾನವನ್ನ ತಕ್ಷಣವೇ ಮತ್ತು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. 1950 ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶವು ಇದನ್ನ ಸ್ಪಷ್ಟಪಡಿಸಿದೆ.

ಈ ಆದೇಶದ ಅಡಿಯಲ್ಲಿ ನಿಷೇಧವು ಸಂಪೂರ್ಣವಾಗಿ ಜಾರಿಯಲ್ಲಿದೆ. 1950 ರ ಆದೇಶದ ಷರತ್ತು 3 ರಲ್ಲಿ ನಿರ್ದಿಷ್ಟಪಡಿಸಿದ ಧರ್ಮಗಳನ್ನ ಹೊರತುಪಡಿಸಿ ಯಾವುದೇ ಧರ್ಮವನ್ನ ಅಳವಡಿಸಿಕೊಳ್ಳುವುದರಿಂದ, ಜನ್ಮ ಸ್ಥಾನಮಾನವನ್ನ ಲೆಕ್ಕಿಸದೆ, ಪರಿಶಿಷ್ಟ ಜಾತಿ ಸ್ಥಾನಮಾನವನ್ನ ತಕ್ಷಣವೇ ಆತ ಕಳೆದುಕೊಳ್ಳುತ್ತಾನೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
‘ಹಿಂದೂ, ಸಿಖ್, ಬೌದ್ಧ ಧರ್ಮದ ಹೊರತಾಗಿ ಇತರ ಧರ್ಮವನ್ನು ಅನುಸರಿಸುವ ಯಾವುದೇ ವ್ಯಕ್ತಿಯು ಪರಿಶಿಷ್ಟ ಜಾತಿಯ ಸದಸ್ಯರಾಗಲು ಸಾಧ್ಯವಿಲ್ಲ. ಬೇರೆ ಯಾವುದೇ ಧರ್ಮಕ್ಕೆ ಮತಾಂತರ ಹೊಂದುವುದರಿಂದ ಪರಿಶಿಷ್ಟ ಜಾತಿಯ (ಎಸ್ಸಿ) ಸ್ಥಾನಮಾನವು ರದ್ದಾಗುತ್ತದೆ. ಹೀಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಯು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಉಲ್ಲಂಘನೆಯನ್ನ ಪ್ರತಿಪಾದಿಸಲು ಸಾಧ್ಯವಿಲ್ಲ ಎಂದಿದೆ ಕೋರ್ಟ್.
ಪ್ರಕರಣ ಹಿನ್ನೆಲೆ ಏನು? – ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ತಮಗೆ ಜಾತಿ ತಾರತಮ್ಯ ಮತ್ತು ನಿಂದನೆ ಎದುರಾಗಿದೆ ಎಂದು ಆರೋಪಿಸಿ ಪಾದ್ರಿ ಆನಂದ್ ಅವರು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನ ರದ್ದುಗೊಳಿಸುವಂತೆ ಕೋರಿ ರಾಮಿರೆಡ್ಡಿ ಅವರು ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆನಂದ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಎಸ್ಸಿ ಸ್ಥಾನಮಾನ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರು ಎಸ್ಸಿ/ಎಸ್ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ನ್ಯಾಯಮೂರ್ತಿ ಎನ್. ಹರಿನಾಥ್ ಅವರು ಎಫ್ಐಆರ್ ಅನ್ನು ರದ್ದುಗೊಳಿಸಿದ್ದರು. ಇದರ ವಿರುದ್ಧ ಆನಂದ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್, ಆಂಧ್ರ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿದಿದೆ.
ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ಹೇಳುವುದೇನು? – ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950, ಭಾರತದ ರಾಷ್ಟ್ರಪತಿಗಳು ಸಂವಿಧಾನದ 341(1) ನೇ ವಿಧಿಯಡಿ ಹೊರಡಿಸಿದ ಪ್ರಮುಖ ಆದೇಶವಾಗಿದೆ. ಇದು ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದ ಸಮುದಾಯಗಳನ್ನು ಪರಿಶಿಷ್ಟ ಜಾತಿಗಳೆಂದು ಗುರುತಿಸಿ, ಅವರಿಗೆ ಮೀಸಲಾತಿ ಹಾಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಈ ಪಟ್ಟಿಯನ್ನು ತಿದ್ದುಪಡಿಗಳ ಮೂಲಕ ಕಾಲಕಾಲಕ್ಕೆ ಮಾರ್ಪಡಿಸಲಾಗಿದೆ.















