ಮನೆ ಅಪರಾಧ ಹಣ ದುಪ್ಪಟ್ಟು ಮಾಡುವುದಾಗಿ ವಂಚನೆ – ಆರೋಪಿ ಬಂಧನ: ₹43,88 ಲಕ್ಷ ನಗದು ವಶ

ಹಣ ದುಪ್ಪಟ್ಟು ಮಾಡುವುದಾಗಿ ವಂಚನೆ – ಆರೋಪಿ ಬಂಧನ: ₹43,88 ಲಕ್ಷ ನಗದು ವಶ

0

ಮಂಡ್ಯ:ಮಳವಳ್ಳಿ ತಾಲೂಕಿನ ಬೆಳಕವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿಂಷಾಪುರ ಗ್ರಾಮದಲ್ಲಿರುವ ಶ್ಯಾಲೋಮ್ ಎಜುಕೇಷನಲ್‌ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಗೆ ಸಹಾಯ ಮಾಡುವುದಾಗಿ ಹೇಳಿ ₹ 70 ಲಕ್ಷ ಎಗರಿಸಿ ಪರಾರಿಯಾಗಿದ್ದ ಸೂರ್ಯ ಎಂಬ ಆರೋಪಿಯನ್ನು ಬಂಧಿಸಿರುವ ಮಳವಳ್ಳಿಯ ಬೆಳಕವಾಡಿ ಪೊಲೀಸರು,ಆತನಿಂದ ₹43,88,500 ಗಳನ್ನು ವಶಪಡಿಸಿಕೊಂಡಿದ್ದಾರೆಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಎನ್.ಯತೀಶ್‌ ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಯು ಮೂಲತಃ ಆಂದ್ರಪ್ರದೇಶದ ಕುಪ್ಪಂನವನಾಗಿದ್ದು, ಈತ ₹1 ಕೋಟಿ ಹಣಕ್ಕೆ 25 ಕೋಟಿ ಹಣ ದುಪ್ಪಟ್ಟು ಮಾಡಿಕೊಡುತ್ತೇನೆಂದು ನಂಬಿಸಿ, ನೋಟಿನ ಅಳತೆಗೆ ಕಟ್ ಮಾಡಿದ್ದ ಬಿಳಿ ಪೇಪರ್ ಗಳನ್ನು ಸಿದ್ಧಪಡಿಸಿಕೊಂಡು,ಒಂದು ಚೀಲದಲ್ಲಿ ಹಾಕಿಕೊಂಡು ತಂದು ಕೊಟ್ಟು, ಶ್ಯಾಲೋಮ್ ಎಜುಕೇಷನಲ್‌ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯ ಎಸ್.ಮೇರಿ ಅವರಿಗೆ ತನ್ನ ಜೊತೆಯಲ್ಲಿ ತಂದಿದ್ದ ಜ್ಯೂಸ್‌ನ್ನು ಕುಡಿಸಿ ಪ್ರಜ್ಞೆ ತಪ್ಪಿಸಿ, ಆನಂತರ ಮನೆಯಲ್ಲಿದ್ದ ಹಣವನ್ನು ಎಗರಿಸಿ ವಂಚನೆ ನಡೆಸಿದ್ದ ಎಂದು ವಿವರಿಸಿದರು.
ಹಣ ಕಳೆದುಕೊಂಡ ಶಿಂಷಾಪುರ ಗ್ರಾಮದ ಎಸ್.ಮೇರಿ,ಕಳೆದ ಜ.21ರಂದು ಬೆಳಗಿನ ಜಾವ 12- 15 ಗಂಟೆಗೆ ದೂರು ನೀಡಿದ್ದರು. ಇದರನ್ವಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕೊಂಡು ತನಿಖೆ ಕೈಗೊಳ್ಳಲಾಗಿತ್ತು ಎಂದರು.
ಈ ಪ್ರಕರಣದ ಪತ್ತೆಗಾಗಿ ಅಪರ ಪೊಲೀಸ್‌ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಎಸ್‌.ಇ.ಗಂಗಾಧರ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿ.ವೈ.ಎಸ್.ಪಿ ಕೃಷ್ಣಪ್ಪ.ವಿ ಅವರ ನೇತೃತ್ವದಲ್ಲಿ, ಹಲಗೂರು ಸಿ.ಪಿ.ಐ ಬಿ.ಎಸ್. ಶ್ರೀಧ‌ರ್, ಬೆಳಕವಾಡಿ ಠಾಣೆಯ ಸಿಬ್ಬಂದಿಯವರಾದ ನಾಗೇಂದ್ರ, ರಿಯಾಜ್ ಪಾಷ,ನಿಂಗರಾಜು, ಸಿದ್ದರಾಜು, ಮಹೇಶ, ಚೇತನ್, ಅವಿನಾಶ್, ರವಿಕಿರಣ್, ಲೋಕೇಶ್ ರವರುಗನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಎಲ್ಲಾ ಆಯಾಮಗಳ ಮೂಲಕ ತನಿಖೆ ಕೈಗೊಂಡು ಆಂಧ್ರ ಮೂಲದ ಹಾಲಿ ಚಾಮರಾಜನಗರ ಜಿಲ್ಲೆಯ ಸಿಂಗಾನಲ್ಲೂರು ಗ್ರಾಮದ ವಾಸಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವಿವರಿಸಿದರು.
ಆರೋಪಿಯಿಂದ ಒಟ್ಟು ಸುಮಾರು 43,88,500/- ರೂ (ನಲ್ವತ್ತಮೂರು ಲಕ್ಷದ ಎಂಬಂತ್ತೆಂಟು ಸಾವಿರದ ಐದುನೂರು ರೂ.ಗಳು) ಮೌಲ್ಯದ ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮತ್ತು 07 ಮೊಬೈಲ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿ ಯಶಸ್ಸು ಸಾಧಿಸಿದ ಬೆಳಕವಾಡಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಅಭಿನಂದಿಸುತ್ತೇನೆಂದು ತಿಳಿಸಿದರು.
ಮನೆ ಕಳ್ಳತನ ಆರೋಪಿಗಳ ಬಂಧನ
ಮಳವಳ್ಳಿ ತಾಲ್ಲೂಕು ತೊರೆಕಾಡನಹಳ್ಳಿ ನಿವಾಸಿ ಅರ್ಜುನ್ ಎಂಬುವರ ಮನೆಯಲ್ಲಿ ಕಳೆದ ಅಕ್ಟೋಬ‌ರ್ 4ರಂದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಆರೋಪಿಗಳು ಇಂತಹ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.ಇವರಿಂದ 6.70 ಲಕ್ಷ ರೂ ಮೌಲ್ಯದ 122 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಎನ್.ಯತೀಶ್‌ ತಿಳಿಸಿದರು.
ಈ ಇಬ್ಬರು ಆರೋಪಿಗಳು ಹಲಗೂರು, ಮಳವಳ್ಳಿ ಗ್ರಾಮಾಂತರ, ಮಳವಳ್ಳಿ ಟೌನ್ ಪೊಲೀಸ್ ಠಾಣೆಗಳ ವ್ಯಾಪ್ತಿಯ 3 ಪ್ರಕರಣಗಳಲ್ಲಿ ಭಾಗಿಯಾಗಿರು
ವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಎಎಸ್ಪಿ ಸಿ.ಇ.ತಿಮ್ಮಯ್ಯ ಹಾಗೂ ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಉಪಸ್ಥಿತರಿದ್ದರು.

ಹಿಂದಿನ ಲೇಖನ ‘ಕುಟೀರ’ ಸಿನಿಮಾದಲ್ಲಿ ನಟ ಕೋಮಲ್, ಪ್ರಿಯಾಂಕಾ ತಿಮ್ಮೇಶ್‌ ನಟನೆ
ಮುಂದಿನ ಲೇಖನಹಿಂದೂ ಧಾರ್ಮಿಕ ಸಂಸ್ಥೆ, ದೇವಾಲಯಗಳಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ ಸರ್ಕಾರ, ಇಲಾಖೆಗಳಲ್ಲಿ ಬಾಕಿ ಉಳಿದ ಅನುದಾನ: ವಿಪಕ್ಷ ನಾಯಕ ಆರ್‌.ಅಶೋಕ