ಮನೆ ಸುದ್ದಿ ಜಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಸಂಪೂರ್ಣ ಬಳಕೆ ಆಗಬೇಕು:  ಡಾ. ಕೆ ವಿ ರಾಜೇಂದ್ರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಸಂಪೂರ್ಣ ಬಳಕೆ ಆಗಬೇಕು:  ಡಾ. ಕೆ ವಿ ರಾಜೇಂದ್ರ

0

ಮೈಸೂರು:ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮೀಸಲಿಟ್ಟ ಅನುದಾನ ಸಂಪೂರ್ಣ ಸದ್ಬಳಕೆಯಾಗಬೇಕು. ಇದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

Join Our Whatsapp Group

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಾಬು ಜಗಜೀವನ್ ರಾಮ್ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್.ಸಿ.ಪಿ/ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆ ಹಾಗೂ ಎಸ್.ಸಿ, ಎಸ್.ಟಿ, ದೌರ್ಜನ್ಯ ತಡೆ ಕಾಯ್ದೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿದ್ದಾರೆ. ಕ್ರಿಯಾ ಯೋಜನೆಗಳನ್ನು ಕ್ರಮಬದ್ಧವಾಗಿ ಮಾಡಿಕೊಳ್ಳಬೇಕು. ನಿಗಧಿಪಡಿಸಿದ ಯೋಜನೆಗಳ ಅನುದಾನ ಬಂದೇ ಬರುತ್ತದೆ. ಕೆಲವೊಂದು ವೇಳೆ ಅನುದಾನವನ್ನು ಉತ್ತಮವಾಗಿ ಬಳಸಿದಾಗ ಬೇರೆ ಜಿಲ್ಲೆಗಳಲ್ಲಿ ಖರ್ಚಾಗದೇ ಉಳಿದ ಅನುದಾನ ನಮ್ಮ ಜಿಲ್ಲೆಗೆ ಬರುವ ಸಾಧ್ಯತೆ ಇರುತ್ತದೆ ಎಂದರು.

ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ನೋಟಿಸ್ ಬೋರ್ಡ್ ಗಳಲ್ಲಿ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳ ಕುರಿತು ಪಾಂಪ್ಲೆಟ್ಸ್ಗಳನ್ನು ಪ್ರದರ್ಶಿಸಬೇಕು, ಎಸ್,ಎಸ್.ಟಿ ಹಾಸ್ಟೆಲ್ ನಿರ್ಮಾಣಕ್ಕೆ ಜಾಗದ ಅಗತ್ಯವಿದ್ದರೆ ಮನವಿ ಸಲ್ಲಿಸಿ ನಿವೇಶನ ಬೇಕಿದ್ದರೆ ಮೂಡಾದಿಂದ ಸಿಎ ನಿವೇಶನಗಳನ್ನು ನೀಡಲಾಗುವುದು ಎಂದರು.

ಸಾಕ್ಷಿದಾರರಿಗೆ ಟಿ.ಎ, ಡಿ.ಎ. ಹೆಚ್ಚಳ ಮಾಡಿ : ಪರಿಶಿಷ್ಟರ ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿ ಹೇಳುವವರಿ ನೀಡುತ್ತಿರುವ ಟಿ.ಎ, ಡಿ.ಎ, ಹೆಚ್ಚಳ ಮಾಡಿ, ಕನಿಷ್ಟ ಒಂದು ದಿನದ ಕೂಲಿಯಷ್ಟಾದರು ನೀಡಿದರೆ ಅವರಿಗೂ ಅನುಕೂಲವಾಗುತ್ತದೆ, ಈಗ ನೀಡುತ್ತಿರುವ ಟಿ.ಎ, ಡಿ,ಎ ಪಡೆಯಲು ಎರಡ್ಮೂರು ಇಲಾಖೆಗಳನ್ನು ಸಂಪರ್ಕಿಸಬೇಕಾಗುತ್ತದೆ ಹಾಗಾಗಿ ಅವರಿಗೆ ಸಾಕ್ಷಿ ಹೇಳಿದ ದಿನವೇ ಟಿ.ಎ, ಡಿ.ಎ ದೊರೆಯುವಂತಾಗಲಿ ಎಂದು ಸಮಿತಿಯ ಸದಸ್ಯರೋರ್ವರು ಅಭಿಪ್ರಾಯಪಟ್ಟರು. ಅದಕ್ಕೆ ದನಿಗೂಡಿಸಿದ ವಿ.ಪ ಸದಸ್ಯರುಗಳಾದ ತಿಮ್ಮಯ್ಯ ಹಾಗೂ ಮಂಜೇಗೌಡ ಈ ಬಗ್ಗೆ ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಸ್ಕಾಲರ್‌ಶಿಪ್ ಆದ್ಯತೆಯಾಗಲಿ: ಎಸ್,ಸಿ.ಎಸ್,ಟಿ. ಜನಾಂಗದ ಮಕ್ಕಳಿಗೆ ನೀಡಲಾಗುವ ವಿಧ್ಯಾರ್ಥಿವೇತನ ಸಮಯಕ್ಕೆ ದೊರೆತು ಅದರ ಪ್ರಯೋಜನ ಮಕ್ಕಳಿಗೆ ಸಿಗಲಿ, ರಾಜ್ಯ, ಕೇಂದ್ರ ಎಂದು ಒಬ್ಬರ ಮೇಲೊಬ್ಬರು ಹೇಳುವುದನ್ನು ಬಿಟ್ಟು ಅರ್ಹ ವಿಧ್ಯಾರ್ಥಿಗಳಿಗೆ ಸಕಾಲಕ್ಕೆ ವಿಧ್ಯಾಥಿವೇತನ ಸಿಗುವಂತೆ ನೋಡಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಪರಿಷತ್ ನ ಸದಸ್ಯರಾದ ಮಂಜೇಗೌಡ ಅವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದಾಥಿವೇತನ ಪಡೆಯುತ್ತಿರುವವ ಪಟ್ಟಿ ತಯಾರಿಸಿ ಅವರಲ್ಲಿ ಯಾರಿಗೆ ವಿದ್ಯಾರ್ಥಿ ವೇತನ ದೊರಕಿದೆ, ಯಾರಿಗೆ ವಿದಾರ್ಥಿವೇತನ ದೊರೆತಿಲ್ಲಾ,ವಿದಾರ್ಥಿವೇತನ ಮಂಜೂರಾಗದೆ ಇರುವುದಕ್ಕೆ ಕಾರಣ ಏನೆಂಬುದನ್ನು ಗುರುತಿಸಿ ವಿದ್ಯಾರ್ಥಿ ವೇತನ ದೊರೆಯದವರಿಗೆ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆ ಮಾಡಿ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ದೌರ್ಜನ್ಯದ ವಿರುದ್ದ ಜಾಗೃತಿ ಕಾರ್ಯಕ್ರಮಗಳಾಗಲಿ: ಪರಿಶಿಷ್ಟರ ದೌರ್ಜನ್ಯದ ವಿರುದ್ದ ಹೋಬಳಿ ಹಾಗೂ ತಾಲೋಕು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳಾಗಬೇಕು. ಈ ಸಮುದಾಯಗಳಿಗಿರುವ ಕಾರ್ಯಕ್ರಮಗಳು, ಕಾನೂನಿನ ರಕ್ಷಣೆ, ಸೌಲಭ್ಯ ಸವಲತ್ತುಗಳ ಬಗೆಗೆ ಸಂವಾದ, ಕಮ್ಮಟ, ಬೀದಿನಾಟಕದಂತಹ ಕಾರ್ಯಕ್ರಮಗಳಾಗಬೇಕೆಂದು ಸಮಿತಿಯ ಸದಸ್ಯರೋರ್ವರು ತಿಳಿಸಿದರು.

ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಭವನ: ನಗರದಲ್ಲಿ ನಿರ್ಮಿಸಲಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಈಗಾಗಲೇ 20 ಕೋಟಿ ಖರ್ಚಾಗಿದ್ದು ಒಳಭಾಗದ ವಿನ್ಯಾಸ, ಆಸನÀ ಮತ್ತು ಧ್ವನಿ ಬೆಳಕಿನ ವ್ಯವಸ್ಥೆಗೆ 22 ಕೋಟಿಗಳಿಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದರು. ಬಾಬು ಜಗಜೀವನರಾಂ ಭವನ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯಾಗಿ ಬಳಕೆಯಾಗುತಿದ್ದು, ಸಮಾಜ ಕಲ್ಯಾಣ ಇಲಾಖೆಯ ಕಟ್ಟಡವನ್ನು ಬಾಬುಜಗಜೀವನ ರಾಂ ಭವನದಂತೆ ನಿರ್ಮಿಸಲು ಮೂಡಾಗೆ ಜಾಗ ಕೋರಿ ಪತ್ರ ಬರೆಯಲಾಗಿದೆ ಹಾಗೂ 16 ಕೋಟಿ ಅನುದಾನ ಒದಗಿಸಲು ಇಲಾಖೆಯಿಂದ ಪತ್ರ ಬಂದಿದೆ ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ ಅವರು ಮಾತನಾಡಿ, ಯಾವುದೇ ಯೋಜನೆಯ ಸೌಲಭ್ಯ ಫಲಾನುಭವಿಗೆ ಪೂರ್ಣವಾಗಿ ತಲುಪಬೇಕು ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧೃವನಾರಾಯಣ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.