ಬೆಂಗಳೂರು(Bengaluru)- ರಾಜ್ಯಾದ್ಯಂತ ಇಂದಿನಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬೇಸಿಗೆ ರಜೆ ನಂತರ ಸಾಮಾನ್ಯವಾಗಿ ಜೂನ್ 1ರಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದವು. ಕೋವಿಡ್ನಿಂದಾಗಿ ಎರಡು ವರ್ಷ ಸರಿಯಾಗಿ ಶಾಲೆಗಳು ನಡೆದಿರಲಿಲ್ಲ. ಹೀಗಾಗಿ ಇಲಾಖೆಯು ಈ ವರ್ಷ ಮೇ 16ರಿಂದಲೇ ಶಾಲೆಗಳನ್ನು ಆರಂಭಿಸಲು ಸೂಚಿಸಿದೆ.
ಇಂದು ಮಧ್ಯಾಹ್ನ 12.30ಕ್ಕೆ ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಕಲಿಕಾ ಚೇತರಿಕೆ’ ಮತ್ತು ಶೈಕ್ಷಣಿಕ ವರ್ಷ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಿದ್ದಾರೆ.
‘ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ಪೂರೈಕೆ ಮಾಡಲಾಗುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಪಟೂರಿನಲ್ಲಿ ಭಾನುವಾರ ತಿಳಿಸಿದ್ದಾರೆ.
ಶಾಲೆಗಳ ಪ್ರಾರಂಭೋತ್ಸವವನ್ನು ಹಬ್ಬದ ರೀತಿ ಮಾಡಬೇಕು. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಪೋಷಕರು, ನಾಗರಿಕರು ಸೇರಿ ಮಕ್ಕಳನ್ನು ಗಣ್ಯ ಅತಿಥಿಗಳನ್ನು ಸ್ವಾಗತಿಸುವ ರೀತಿಯಲ್ಲಿ ವಿಶೇಷವಾಗಿ ಬರಮಾಡಿಕೊಳ್ಳಬೇಕು. ಮೊದಲ ದಿನದಂದು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿ ನೀಡಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.