ಭಾರತವು ಇದೇ ಮೊದಲ ಬಾರಿಗೆ ‘ವಿಶ್ವ ಕಾಫಿ ಸಮ್ಮೇಳನ’ವನ್ನು (ಡಬ್ಲ್ಯುಸಿಸಿ) ಆಯೋಜಿಸುತ್ತಿದ್ದು, ಅದರ ಐದನೇ ಆವೃತ್ತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ಆಯೋಜಿಸಲಾಗಿದೆ.
ಬೆಂಗಳೂರು: ಭಾರತವು ಇದೇ ಮೊದಲ ಬಾರಿಗೆ ‘ವಿಶ್ವ ಕಾಫಿ ಸಮ್ಮೇಳನ’ವನ್ನು (ಡಬ್ಲ್ಯುಸಿಸಿ) ಆಯೋಜಿಸುತ್ತಿದ್ದು, ಅದರ ಐದನೇ ಆವೃತ್ತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 25 ರಿಂದ 28 ರವರೆಗೆ ಆಯೋಜಿಸಲಾಗಿದೆ.
ಭಾರತದ ಕಾಫಿ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಕಾಫಿ ಉದ್ಯಮದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ) ನಾಲ್ಕು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆಜಿ ಜಗದೀಶ್ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕಾಫಿ ಸಮ್ಮೇಳನದಲ್ಲಿ 2400ಕ್ಕೂ ಅಧಿಕ ಪ್ರತಿನಿಧಿಗಳು, 117 ಸ್ಪೀಕರ್ಗಳು, 208 ಪ್ರದರ್ಶಕರು, 10,000ಕ್ಕೂ ಹೆಚ್ಚು ಸಂದರ್ಶಕರು ಮತ್ತು 300ಕ್ಕೂ ಹೆಚ್ಚು ಬಿಸಿನೆಸ್ ಟು ಬಿಸಿನೆಸ್ ಸಭೆಗಳು ಒಳಗೊಂಡಂತೆ 80ಕ್ಕೂ ಅಧಿಕ ದೇಶಗಳಿಂದ ಹಲವರನ್ನು ಸೆಳೆಯುವ ನಿರೀಕ್ಷೆಯಿದೆ.
ಡಬ್ಲ್ಯುಸಿಸಿಯ ಹಿಂದಿನ ಆವೃತ್ತಿಗಳು ಇಂಗ್ಲೆಂಡ್ (2001), ಬ್ರೆಜಿಲ್ (2005), ಗ್ವಾಟೆಮಾಲಾ (2010) ಮತ್ತು ಇಥಿಯೋಪಿಯಾ (2016) ದಲ್ಲಿ ನಡೆದಿದ್ದವು.