ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-೩ರ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯನ್ನು ಬರೆದ ೧,೧೧,೦೦೨ ವಿದ್ಯಾರ್ಥಿಗಳ ಪೈಕಿ ೨೨,೪೪೬ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ.೨೦.೨೨ರಷ್ಟು ಉತ್ತೀರ್ಣತೆ ದಾಖಲಾಗಿದೆ.
ಪರೀಕ್ಷೆಯನ್ನು ಬರೆದ ೮೨,೬೮೩ ಪ್ರೆಶರ್ಸ್ ವಿದ್ಯಾರ್ಥಿಗಳ ಪೈಕಿ ೧೮,೮೩೪ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೊಸಬರ ವಿದ್ಯಾರ್ಥಿಗಳ ಉತ್ತೀರ್ಣತೆ ಶೇ.೨೨.೭೮ರಷ್ಟಿದೆ. ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬಂದಿದೆ. ೨೦೨೫ರ ಪರೀಕ್ಷೆ-೩ರಲ್ಲಿ ಒಟ್ಟು ೧೭,೩೯೮ ವಿದ್ಯಾರ್ಥಿಗಳು ಅಂಕ ಸುಧಾರಣೆಗೆ ಹಾಜರಾಗಿದ್ದು, ಅವರಲ್ಲಿ ೧೧,೯೩೭ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. ೨೦೨೪ರ ಪರೀಕ್ಷೆ-೩ರಲ್ಲಿ ಈ ಸಂಖ್ಯೆ ೭,೪೨೦ ಆಗಿತ್ತು.
ಒಟ್ಟಾರೆ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೊಸಬರು ೬,೩೯,೮೦೦ ವಿದ್ಯಾರ್ಥಿಗಳು ಹಾಜರಾಗಿದ್ದು, ೫,೪೫,೦೩೨ ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣತಾ ಪ್ರಮಾಣ ಶೇ.೮೫.೧೯ರಷ್ಟಿದೆ. ಒಟ್ಟಾರೆ(ಖಾಸಗಿ ಮತ್ತು ರಿಪೀಟರ್ಸ್, ಹೊಸಬರು ಸೇರಿ) ಒಟ್ಟು ೭,೦೯,೯೬೮ ವಿದ್ಯಾರ್ಥಿಗಳು ಹಾಜರಾಗಿದ್ದು, ೫,೬೬,೬೩೬ ಮಂದಿ ಉತ್ತೀರ್ಣರಾಗಿದ್ದಾರೆ. ೨೦೨೫ರ ದ್ವಿತೀಯ ಪಿಯುಸಿ ಪರೀಕ್ಷೆಯ ಕ್ರೋಢೀಕೃತ ಉತ್ತೀರ್ಣತಾ ಪ್ರಮಾಣ ಶೇ.೭೯.೮೧ರಷ್ಟಿದೆ.
ವಿದ್ಯಾರ್ಥಿಗಳಿಗೆ ತಮ್ಮ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸರಕಾರ ನೀಡಿದ ಅವಕಾಶದ ಸದ್ಬಳಕೆಯಾಗುತ್ತಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಮುಂದಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಇದು ಸಿಇಟಿ ರ್ಯಾಂಕಿಂಗ್ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳ ಬಯಕೆಯನ್ನು ಪ್ರತಿಬಿಂಬಿಸುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-೧, ಪರೀಕ್ಷೆ-೨, ಮತ್ತು ಪರೀಕ್ಷೆ-೩ರ ಕ್ರೋಢೀಕೃತ ಫಲಿತಾಂಶವು ರಾಜ್ಯದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಪ್ರಗತಿಯನ್ನು ಎತ್ತಿ ತೋರಿಸುತ್ತದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿದ್ದಾರೆ.














