ಮನೆ ರಾಜ್ಯ ಡಿಆರ್​ಡಿಒ, ಇಸ್ರೋ ಸೇರಿದಂತೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ!

ಡಿಆರ್​ಡಿಒ, ಇಸ್ರೋ ಸೇರಿದಂತೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ!

0

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರದಾಳಿಯ ಪರಿಣಾಮವಾಗಿ ಕರ್ನಾಟಕದ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರಾಜ್ಯದ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಭದ್ರತಾ ಕ್ರಮಗಳು ಕೇಂದ್ರದ ನಿರ್ದೇಶನದಂತೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ಇಸ್ರೋ, ಡಿಆರ್​ಡಿಒ, ಹೆಚ್​ಎಎಲ್​ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸದ ಸ್ಥಳಗಳಲ್ಲೆ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಈ ಸ್ಥಳಗಳಲ್ಲಿನ ಭದ್ರತೆಯನ್ನು ಕೇಂದ್ರ ಸರ್ಕಾರ ನೇರವಾಗಿ ನಿರ್ವಹಣೆ ಮಾಡುತ್ತದೆ. ಪಹೆಲ್ಗಾಮ್ ದಾಳಿ ನಂತರ ಸಹಜವಾಗಿ ಭದ್ರತೆಯನ್ನು ಹೆಚ್ಚಿಸಿದೆ. ಇಂತಹ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಜಮ್ಮು ಕಾಶ್ಮೀರ ಪಹೆಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿದ​ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಾವಲು ಪಡೆ ಪೊಲೀಸರು ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಮಂಗಳೂರಿನ ಬಂದರು ತೀರದಲ್ಲಿ ಪರಿಶೀಲನೆ ನಡೆಸಿದಿದ್ದಾರೆ. ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್, ಮೀನುಗಾರರನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಕ್ ಡ್ರಿಲ್​ ನಡೆಯಿತು. ಹಲಸೂರಿನಲ್ಲಿ ನಡೆದ ಮಾಕ್​ ಡ್ರಿಲ್​ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಭಾಗಿಯಾಗಿದ್ದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾಕ್​ಡ್ರಿಲ್ ನಡೆದರೆ ಇಡೀ ರಾಜ್ಯಕ್ಕೆ ತಿಳಿಯುತ್ತೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ಮಾಕ್​ಡ್ರಿಲ್ ನಡೆಯುತ್ತೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಕ್​ಡ್ರಿಲ್​ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಕಡೆ ಮಾಕ್​ ಡ್ರಿಲ್ ನಡೆಯುವ ಸಾಧ್ಯತೆ ಇದೆ. ಕದಂಬ ನೌಕಾನೆಲೆ, ಕೈಗಾ ಅಣುಸ್ಥಾವರ ಇರುವುದರಿಂದ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

“ಬೇರೆ ಜಿಲ್ಲೆಗಳಲ್ಲಿಯೂ ಮುಂದಿನ ದಿನಗಳಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಭದ್ರತೆಯಲ್ಲಿ ಯಾವೆಲ್ಲಾ ಅವಕಾಶವಿದೆ, ಎಲ್ಲ ಸ್ಥಳಗಳನ್ನೂ ಮುನ್ನೆಚ್ಚರಿಕೆಯಿಂದ ನೋಡಲಾಗುತ್ತಿದೆ” ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.