ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸೌಧದ ಬಳಿ ಭದ್ರತಾಲೋಪವಾಗಿದೆ. ವಿಧಾನಸೌಧ ಆವರಣಕ್ಕೆ ಕಾರನ್ನು ನುಗ್ಗಿಸಿ, ಸ್ಪೀಕರ್ ಕಾರು ಮೇಲೆ ಇಂಕ್ ಎರಚಿ ಆಗಂತುಕರು ಪರಾರಿಯಾಗಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಸಮಯದಲ್ಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಯುಪಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೇಟ್ ಸಂಖ್ಯೆ 2 ಅನ್ನು ಮುರಿದು ವಿಧಾನಸಭೆ ಆವರಣವನ್ನು ಪ್ರವೇಶಿಸಿ ನಂತರ ತಪ್ಪಿಸಿಕೊಂಡಿದೆ.
UP-26 AZ 8090 ಸಂಖ್ಯೆಯ ಟಾಟಾ ಸಿಯೆರಾ ಕಾರು, ಭದ್ರತೆಗಾಗಿ CRPF ಸಿಬ್ಬಂದಿ ನಿಯೋಜಿಸಲಾಗಿದ್ದ VIP ಪ್ರವೇಶದ್ವಾರದಲ್ಲಿ ಗೇಟ್ ಅನ್ನು ಭೇದಿಸಿ ಒಳಗೆ ಪ್ರವೇಶಿಸಿತು. ತಡೆಗೋಡೆಯನ್ನು ಭೇದಿಸಿ ಚಾಲಕ ವಾಹನವನ್ನು ಹಠಾತ್ತನೆ ನಿಲ್ಲಿಸಿ, ಗೇಟ್ ಬಳಿ ಹೂಗುಚ್ಛವನ್ನು ಇರಿಸಿ ನಂತರ ಎಸ್ಕೇಪ್ ಆಗಿದ್ದಾನೆ.
ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಯ ಕಡೆಗೆ ಆಗಂತುಕ ತೆರಳಿ ಮುಖಮಂಟಪದ ಬಳಿ ಹೂವಿನ ಪುಷ್ಪಗುಚ್ಛ ಇರಿಸಿ ಹೊರ ಹೋಗಿದ್ದಾನೆ ಎಂದು ದೆಹಲಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ಸ್ಪೀಕರ್ ಅವರ ಕಾರಿನ ಮೇಲೆ ಇಂಕ್ ಎರಚಿ ಚಾಲಕ ದುಷ್ಕೃತ್ಯ ಎಸಗಿದ್ದಾನೆ ಎಂದಿದ್ದಾರೆ.
ಬಾಂಬ್ ನಿಷ್ಕ್ರಿಯ ದಳದ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಪುಷ್ಪಗುಚ್ಛದೊಳಗೆ ಇದುವರೆಗೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















